ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರೇ ಅನಿವಾರ್ಯ ಅಂತ ವರಿಷ್ಠರಿಗೆ ಮನವರಿಕೆಯಾಗಿದೆ. ಅವರ ಬೇಡಿಕೆಯಂತೆ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಈ ಮೂಲಕ ಹಲವು ದಶಕಗಳಿಂದ ಬಿಎಸ್‌ವೈ ಹಿಡಿತದಲ್ಲಿದ್ದು ಕೈ ತಪ್ಪಿ ಹೋಗಲಿದೆ ಎನ್ನುವಷ್ಟರಲ್ಲೇ ಮತ್ತೆ ರಾಜ್ಯ ಬಿಜೆಪಿ ಅವರ ತೆಕ್ಕೆಗೆ ಜಾರತೊಡಗಿದೆ. ಹೌದು. ವಿಜಯೇಂದ್ರ ಅವರ ಹೆಸರನ್ನು ರಾಜ್ಯ ಕೋರ್ ಕಮಿಟಿ ಪರಿಷತ್‌ಗೆ ಶಿಫಾರಸ್ಸು ಮಾಡುವುದರೊಂದಿಗೆ ಪಕ್ಷ ಯಡಿಯೂರಪ್ಪ ಅವರಿಗೆ ಶರಣಾಗಿದೆ. ವರಿಷ್ಠರು ಒಲವು ತೋರಿದ ಬಳಿಕವಷ್ಟೇ ಕೋರ್ ಕಮಿಟಿ ಈ ನಿರ್ಧಾರ ಕೈಗೊಂಡಿದೆ.
Advertisement
ರಾಜ್ಯದಲ್ಲಿ ದಶಕಗಳ ಕಾಲ ಓಡಾಡಿ, ಸಂಘಟನೆ ಮಾಡಿ ಪಕ್ಷವನ್ನು ಶೂನ್ಯದಿಂದ ಅಧಿಕಾರದ ಸನಿಹಕ್ಕೆ ತರುವಲ್ಲಿ ಬಿಎಸ್‌ವೈ ಪಾತ್ರ ಅನನ್ಯ. ಅಧಿಕಾರಕ್ಕೆ ತರುವುದರ ಜೊತೆಜೊತೆಗೆ ಪಕ್ಷದಲ್ಲಿಯೂ ಹಿಡಿತ ಸಾಧಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ವರಿಷ್ಠರು ಮತ್ತು ಪಕ್ಷದೊಳಗಿನ ಹಿತಶತ್ರುಗಳ ಚಿತಾವಣೆಗೆ ಬೇಸತ್ತು 2013 ರಲ್ಲಿ ಪಕ್ಷ ತೊರೆದು, ಬೇರೆ ಪಕ್ಷ ಕಟ್ಟಿ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಬಿಜೆಪಿಯನ್ನು ಮಟ್ಟ ಹಾಕುವಲ್ಲಿ ಸಫಲರಾಗಿದ್ದರು. ಅವರ ಹೊರತಾಗಿ ಪಕ್ಷ ಅಧಿಕಾರದ ಸನಿಹಕ್ಕೂ ಬರಲು ಸಾಧ್ಯವಿಲ್ಲ ಎಂದು ಸಾಬೀತು ಮಾಡಿದ್ದರು. ಒಂದೇ ವರ್ಷದಲ್ಲಿ ಮಾತೃಪಕ್ಷಕ್ಕೆ ಮರಳಿ, ಸಂಸದರಾಗಿ ಬಳಿಕ ಪಕ್ಷದ ಚುಕ್ಕಾಣಿ ಹಿಡಿದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತೆ ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು ಇತಿಹಾಸ.
Advertisement
Advertisement
ಹಾಗೇ ನೋಡಿದರೆ 2008 ರಲ್ಲಿ ವಚನಭ್ರಷ್ಟತೆಯ ಸಹಾನುಭೂತಿ ಪಡೆದು ತಮ್ಮ ಸಮುದಾಯದ ಭಾರೀ ಬೆಂಬಲದೊಂದಿಗೆ ಚುನಾವಣೆ ಎದುರಿಸಿದರೂ ಬಿಜೆಪಿ ಸರಳ ಬಹುಮತ ಪಡೆಯಲಾಗಲಿಲ್ಲ. ಆದರೂ ಪಕ್ಷೇತರರ ನೆರವಿನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಾದ ಬಳಿಕವಂತೂ ಪಕ್ಷದಲ್ಲಿ ಅವರ ಹಿಡಿತ ಭದ್ರವಾಗಿ ಪ್ರಶ್ನಾತೀತ ನಾಯರಾಗಿ ನೆಲೆಯೂರಿದರು. ವೀರಶೈವ ಲಿಂಗಾಯತ ಸಮುದಾಯದ ಐಕಾನ್ ಆಗಿ ದೊಡ್ಡ ಸಮುದಾಯದ ಬಲದ ಜೊತೆಗೆ ಇನ್ನಿತರ ಹಲವು ವರ್ಗಗಳ ಒಡನಾಟ ಬೆಂಬಲದಿಂದ ಅವರ ಶಕ್ತಿ ದ್ವಿಗುಣವಾಯಿತು. 2018 ರಲ್ಲಿ ಮತ್ತೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಬಹುಮತವಿಲ್ಲದಿದ್ದರೂ, 2019 ರ ವೇಳೆಗೆ ಆಪರೇಷನ್ ಕಮಲದ ಮೂಲಕ ಗದ್ದುಗೆ ಏರಿದ್ದು ಇತಿಹಾಸ. 75 ವರ್ಷಕ್ಕಿಂತ ಹಿರಿಯರನ್ನು ಅಧಿಕಾರದಿಂದ ಹೊರಗಿಡುವ ಪಕ್ಷದ ಅಲಿಖಿತ ನಿಯಮ ಕೂಡ ಇವರಿಗೆ ಅನ್ವಯವಾಗಲಿಲ್ಲ. ಪಕ್ಷದ ಘಟಾನುಘಟಿ ನಾಯರಾದ ಎಲ್ ಕೆ ಅಡ್ವಾಣಿ, ಮುರಳಿಮನೋಹರ್ ಜೋಷಿ, ಸುಮಿತ್ರಾ ಮಹಾಜನ್ ಮೊದಲಾದವರಿಗೆ ಅನ್ವಯವಾದ ಈ ನಿಯಮ ಬಿಎಸ್‌ವೈ ಮಟ್ಟಿಗೆ ಕಾರ್ಯಗತವಾಗಲಿಲ್ಲ. ಇದು ಅವರು ರಾಜ್ಯ ಬಿಜೆಪಿಯ ಮಟ್ಟಿಗೆ ಎಷ್ಟು ಪ್ರಭಾವಿ ಎಂಬುದನ್ನು ತೋರಿಸಿ ಕೊಟ್ಟಿತ್ತು. ಅದರ ಪರಿಣಾಮವೇ ಅವರನ್ನು ಮುಟ್ಟುವ ಎದೆಗಾರಿಕೆ ವರಿಷ್ಠರಿಗೆ ಇರಲಿಲ್ಲ ಎನ್ನುವುದು ವಾಸ್ತವ. ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡು ರಾಜ್ಯದಲ್ಲಿ ಪಕ್ಷದ ನೆಲೆ ವಿಸ್ತರಿಸುವುದು ಅಸಾಧ್ಯ ಎಂಬ ಅರಿವು ವರಿಷ್ಠರಿಗೆ ಇತ್ತು. ಹಾಗಾಗಿಯೇ ಅವರ ಪದಚ್ಯುತಿ ಪ್ರಕ್ರಿಯೆ ವಿಳಂಬವಾಯಿತು.
Advertisement
ಯಡಿಯೂರಪ್ಪ ಮುಂದಿಟ್ಟ ಷರತ್ತುಗಳನ್ನು ಒಪ್ಪಿದ ಹೈಕಮಾಂಡ್ ನಾಯಕರು, ತಮ್ಮ ಪಟ್ಟುಗಳನ್ನು ಉಪಯೋಗಿಸಿ ಜಾಣತನದಿಂದ ಕೊನೆಗೂ ಅವರ ಮನವೊಲಿಸಿ ಸಿಎಂ ಗಾದಿಯಿಂದ ಇಳಿಸಿದರು. ಪುತ್ರ ವಿಜಯೇಂದ್ರಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕೊಡಿಸಿ ಭವಿಷ್ಯವನ್ನು ಭದ್ರಗೊಳಿಸಬೇಕೆಂಬುದು ಮಾತ್ರ ಅವರ ಬೇಡಿಕೆಯಾಗಿತ್ತು.
ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಹೈಕಮಾಂಡ್ ಬೇರೆ ಲೆಕ್ಕಾಚಾರದಲ್ಲಿತ್ತು. ಪಕ್ಷವನ್ನು ವ್ಯಕ್ತಿಯೊಬ್ಬರ ಅವಲಂಬನೆಯಿಂದ ಹೊರತಂದು, ಸಂಘಟನೆ ಮೂಲಕವೇ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶ ವರಿಷ್ಠರದ್ದಾಗಿತ್ತು. ಮೊದಲ ಪ್ರಯತ್ನವಾಗಿ ಬಿಎಸ್‌ವೈ ಬಯಸುವ ಅವರದ್ದೇ ಸಮುದಾಯದ ನಾಯಕನ್ನು ಸಿಎಂ ಗಾದಿಗೆ ತಂದು ಅವರನ್ನು ಕಾಲಕ್ರಮೇಣ ದುರ್ಬಲಗೊಳಿಸುವುದಾಗಿತ್ತು. ಪದಚ್ಯುತಿ ಬಳಿಕ ಮೂಲೆಗುಂಪು ಮಾಡಿ ಪರ್ಯಾಯ ನಾಯಕತ್ವಕ್ಕೆ ಮಣೆಹಾಕಿ ಪಕ್ಷದ ಬಲವರ್ಧನೆಗೆ ಮುಂದಾಗುವ ತಂತ್ರಗಾರಿಕೆ ಹೈಕಮಾಂಡ್ ನದ್ದಾಗಿತ್ತು.
ಉತ್ತರಭಾರತದ ರಾಜ್ಯಗಳಲ್ಲಿ ನಡೆಸಿದ ತಂತ್ರಗಾರಿಕೆಯನ್ನು ಕರ್ನಾಟಕದಲ್ಲೂ ಪ್ರಯೋಗಿಸುವ ಲೆಕ್ಕಾಚಾರ ಬಿಜೆಪಿ ರಾಷ್ಟ್ರೀಯ ನಾಯಕರದ್ದು. ಅಲ್ಲಿ ಪ್ರಬಲವಾಗಿದ್ದ ಜಾತಿ ರಾಜಕಾರಣ ಸಮೀಕರಣಗಳನ್ನು ತಲೆ ಕೆಳಗೆ ಮಾಡಿದ ಭಾವನಾತ್ಮಕ, ಧರ್ಮರಾಜಕಾರಣ ಬಿಜೆಪಿಯ ಕೈಹಿಡಿದಿದೆ. ಆದರೆ ಅದು ಇಲ್ಲಿ ಸಫಲವಾಗುತ್ತದೆ ಎನ್ನುವ ಭರವಸೆ ನಾಯಕರಿಗೆ ಮೂಡಿಲ್ಲ. ಯಾಕೆಂದರೆ ಅದನ್ನು ಜಾರಿಗೆ ತರಲು ಸಮರ್ಥ ನಾಯಕರ ಪಡೆ ರಾಜ್ಯದಲ್ಲಿ ಇಲ್ಲ. ಸರ್ಕಾರದೊಳಗಿರುವ ನಾಯಕರು ಸಿಎಂ ಸೇರಿದಂತೆ ಬಹುತೇಕರು ಜನತಾ ಪರಿವಾರದಿಂದ ಬಂದವರು. ಅವರು ಅಷ್ಟೊಂದು ಪರಿಣಾಮಕಾರಿಯಾಗಿ ಈ ವಿಚಾರದಲ್ಲಿ ಕಾರ್ಯನಿರ್ವಹಿಸುತ್ತಾರೆಂಬ ಖಾತರಿ ಇಲ್ಲ. ಸಂಘ ಪರಿವಾರದ ಹಿನ್ನೆಲೆಯ ಮುಖಂಡರ ಸಂಖ್ಯೆ ಸಚಿವ ಸಂಪುಟದಲ್ಲಿ ಕಡಿಮೆ ಆಗಿದೆ. ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ, ಶೆಟ್ಟರ್ ಅವರಿಂದ ಅಸಾಧ್ಯ. ಉಳಿದಿರುವವರ ಪೈಕಿ ಅಶೋಕ್, ಅರಗ ಜ್ಞಾನೇಂದ್ರ ಅವರ ಕೈಲಾಗಲ್ಲ ಅಂತ ಗೊತ್ತೇ ಇದೆ. ಹಾಗಾಗಿ ಗುರಿ ತಲುಪಲು ಈ ಪ್ರಯೋಗ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದ ಹೈಕಮಾಂಡ್ ತಮ್ಮ ಎಲ್ಲಾ ಬಿಗಿನಿಲುವುಗಳನ್ನು ಸಡಿಲಗೊಳಿಸಿ ಮತ್ತೆ ಜಾತಿ ಸಮೀಕರಣದ ರಾಜಕಾರಣಕ್ಕೆ ಮೊರೆ ಹೋಗಲು ನಿರ್ಧರಿಸಿದೆ. ಅದರ ಮೊದಲ ಪ್ರಯೋಗವೇ ಯಡಿಯೂರಪ್ಪ ಅವರಿಗೆ ಮತ್ತೆ ಮಣೆ ಹಾಕುವುದು.
ಪುತ್ರನಿಗೆ ಸೂಕ್ತ ಸ್ಥಾನಮಾನ ಕೊಡಲೇಬೇಕೆಂಬ ಬಿಎಸ್ ವೈ ಬೇಡಿಕೆ ವರಿಷ್ಠರಿಗೆ ನುಂಗಲಾರದ ತುತ್ತಾಗಿತ್ತು. ಹಾಲಿ ಸರ್ಕಾರದಲ್ಲಿ ಪುತ್ರ ಸಚಿವ ಸ್ಥಾನ ಅಲಂಕರಿಸಬೇಕೆಂಬ ಅವರ ಆಸೆಗೆ ಆರಂಭದಲ್ಲಿ ಪಕ್ಷ ಸೊಪ್ಪು ಹಾಕಲಿಲ್ಲ. ಆಗ ಪುತ್ರ ವಿಜಯೇಂದ್ರ ಮೂಲಕ ರಾಜ್ಯದೆಲ್ಲೆಡೆ ಪರ್ಯಾಯ ಸಂಘಟನೆ ಮೂಲಕ ಸಮುದಾಯದಲ್ಲಿ ಇನ್ನಷ್ಟು ಗಟ್ಟಿಯಾಗಲು ಹೊರಟು ಪಕ್ಷಕ್ಕೆ ವಿಜಯೇಂದ್ರ ಅನಿವಾರ್ಯವಾಗುಂತಹ ಸನ್ನಿವೇಶ ನಿರ್ಮಿಸಿದರು. ತಕ್ಷಣ ಭವಿಷ್ಯದ ಅಪಾಯವನ್ನು ಅರಿತ ರಾಷ್ಟ್ರೀಯ ನಾಯಕರು ಮೃದುವಾದರು ಎಂಬುದು ಬಿಎಸ್ ವೈ ಆಪ್ತವಲಯದ ಅಭಿಮತ. ಇದು ವಿಜಯೇಂದ್ರ ವಿಧಾನಪರಿಷತ್ ಪ್ರವೇಶದ ಚರ್ಚೆಗೆ ಮುನ್ನುಡಿಯಾಯಿತು. ಆ ಮೂಲಕ ಯಡಿಯೂರಪ್ಪ ಅವರನ್ನು ಉಪೇಕ್ಷಿಸಿ ರಾಜ್ಯದಲ್ಲಿ ಪಕ್ಷ ದಡ ಸೇರುವುದು ಅಸಾಧ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು.