ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ನಡೆಯುವ ಚುನಾವಣೆಗೆ ಬಿಜೆಪಿ -ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಉಭಯ ಪಕ್ಷಗಳಲ್ಲಿ ಯಾರಿಗೆ ಮೇಲುಗೈ-ಯಾರಿಗೆ ಹಿನ್ನಡೆ ಅನ್ನುವ ಚರ್ಚೆ ಆರಂಭವಾಗಿದೆ.
ಗೆಲ್ಲಲು ಅವಕಾಶ ಇರುವ ನಾಲ್ಕು ಸ್ಥಾನಗಳಿಗೆ ಬಿಜೆಪಿ ಇಂದು ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೆ ಕಾಂಗ್ರೆಸ್ ನಿನ್ನೆ ಸಂಜೆ ಪಟ್ಟಿ ಬಿಡುಗಡೆ ಮಾಡಿತ್ತು. ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆಂದೇ ನಿರೀಕ್ಷೆ ಇದ್ದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿ ವರಿಷ್ಠರು ಅಚ್ಚರಿ ಮೂಡಿಸಿದ್ದಾರೆ.
Advertisement
ಬಿಜೆಪಿ ಭವಿಷ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲ್ಲ ಎನ್ನುವ ಸಂದೇಶ ರವಾನಿಸಿದೆ. ಇತ್ತೀಚೆಗೆ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲ್ಲ ಎನ್ನುವ ಸಂದೇಶ ರವಾನಿಸಿದ್ದರು. ಅದರಂತೆ ರಾಜ್ಯದ ಎಲ್ಲಾ ನಾಯಕರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
Advertisement
Advertisement
ಅದೇ ರೀತಿ ಕಾಂಗ್ರೆಸ್ ಹೈಕಮಾಂಡ್ ಕೂಡ ಇಲ್ಲಿಯ ಬಣ ರಾಜಕೀಯದ ಒತ್ತಡಕ್ಕೆ ಸೊಪ್ಪು ಹಾಕದೇ ದಿಟ್ಟ ನಿರ್ಧಾರ ಕೈಗೊಂಡಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ತಮ್ಮ ಬಣಗಳ ಅಭ್ಯರ್ಥಿಗಳಿಗೆ ಟೆಕೆಟ್ ಕೊಡಿಸಲು ಕಸರತ್ತು ನಡೆಸಿ ವಿಫಲರಾಗಿದ್ದಾರೆ. ಇಬ್ಬರ ಒತ್ತಡಕ್ಕೂ ಸೊಪ್ಪು ಹಾಕದೇ ಹೈಕಮಾಂಡ್ ತನ್ನದೇ ಸಮೀಕರಣದಂತೆ ಅಭ್ಯರ್ಥಿಗಳ ಕಣಕ್ಕಿಳಿಸಲು ನಿರ್ಧರಿಸಿದೆ. ಆ ಮೂಲಕ ಬಣ ರಾಜಕೀಯವನ್ನು ಇದೇ ಹಂತದಲ್ಲಿ ಕೊನೆಗೊಳಿಸುವ ಸಂದೇಶ ರವಾನಿಸಿದೆ. ಇದನ್ನೂ ಓದಿ: ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
Advertisement
ಯಾರಿಗೆ ಮೇಲುಗೈ-ಯಾರಿಗೆ ಹಿನ್ನಡೆ?
ಬಿಜೆಪಿಯ ನಾಲ್ಕು ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಯಾರ ಕೈ ಮೇಲಾಗಿದೆ ಎಂಬ ಚರ್ಚೆ ಆರಂಭವಾಗಿದೆ. ನಾಲ್ವರ ಪೈಕಿ ಮೂವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅಭ್ಯರ್ಥಿಗಳು ಎನ್ನಲಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೇಶವಪ್ರಸಾದ್ ಮತ್ತು ಹೇಮಲತಾ ಅವರ ಆಯ್ಕೆಯಲ್ಲಿ ಸಂತೋಷ್ ಕೈ ಮೇಲಾಗಿದೆ. ಇನ್ನು ನಾರಾಯಣಸ್ವಾಮಿ ಆಯ್ಕೆಯಲ್ಲೂ ಅವರ ಕೈಚಳಕ ನಡೆದಿದೆ ಎನ್ನಲಾಗಿದೆ.
ಇದೇ ವೇಳೆ ತಮ್ಮ ಆಪ್ತರಾದ ಗೀತಾ ವಿವೇಕಾನಂದ, ನಿರ್ಮಲ್ ಸುರಾನಾ , ನಂದೀಶ್, ಸಿದ್ದರಾಜು ಅವರಿಗೆ ಟಿಕೆಟ್ ಕೊಡಿಸಲು ಸಂತೋಷ್ ಅವರಿಗೆ ಸಾಧ್ಯವಾಗಿಲ್ಲವಾದರೂ ಹೆಚ್ಚಿನ ಆಯ್ಕೆಯಲ್ಲಿ ಅವರೇ ಮುನ್ನಡೆ ಸಾಧಿಸಿದ್ದಾರೆ. ಇದರ ಜೊತೆಗೆ ಬಿಎಸ್ ವೈ ಪುತ್ರ ವಿಜಯೇಂದ್ರ ಸೇರಿದಂತೆ ಯಡಿಯೂರಪ್ಪ ಬಣದ ಯಾರಿಗೂ ಅವಕಾಶ ಸಿಕ್ಕಿಲ್ಲ. ಹೀಗಾಗಿ ಬಿಎಸ್‌ವೈಗೆ ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ಭಾರೀ ಹಿನ್ನಡೆಯಾಗಿದೆ.
ಇದೇ ವೇಳೆ ಪರಿಷತ್ ಟಿಕೆಟ್ ವಂಚಿತ ನಿರ್ಮಲ್ ಸುರಾನಾ ಹಾಗೂ ಗೀತಾ ವಿವೇಕಾನಂದ ಅವರಿಗೆ ರಾಜ್ಯಸಭೆ ಟಿಕೆಟ್ ಕೊಡಿಸಲು ಬಿಎಲ್ ಸಂತೋಷ್ ಪ್ರಯತ್ನ ನಡೆಸಿದ್ದಾರೆ. ಅದೂ ಕೂಡ ಕೈಗೂಡಿದರೆ ಅವರು ರಾಜ್ಯ ಬಿಜೆಪಿ ವಿಚಾರದಲ್ಲಿ ಇನ್ನಷ್ಟು ಪ್ರಬಲರಾಗಿ ಬಿಎಸ್ ವೈ ಬಣದ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ. ಈ ನಡುವೆ ತಮ್ಮನ್ನು ಕಡೆಗಣಿಸಿ ಟಿಕೆಟ್ ನೀಡಿದ್ದಲ್ಲದೇ, ನಾಮಪತ್ರ ಸಲ್ಲಿಸುವ ವೇಳೆಯೂ ಸೌಜನ್ಯಕ್ಕೂ ಆಹ್ವಾನಿಸದಿರುವುದು ಬಿಎಸ್ ವೈ ಅವರು ಇನ್ನಷ್ಟು ಬೇಸರಗೊಳ್ಳುವಂತೆ ಮಾಡಿದೆ. ಈ ಎಲ್ಲಾ ವಿದ್ಯಮಾನಗಳ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯದ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.