ಗಾಂಧಿನಗರ: ಗುಜರಾತ್‌ನಲ್ಲಿ ಪ್ರವಾಹದಿಂದಾಗಿ (Gujarat floods) ಬೀದಿಯಲ್ಲಿ ಬಿದ್ದಿದ್ದ ಮೊಸಳೆಗಳನ್ನು ರಕ್ಷಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಅದರಲ್ಲೂ ವಡೋದರಾ ನಗರದಲ್ಲಿ ಯುವಕರಿಬ್ಬರು ಮೊಸಳೆಯೊಂದನ್ನು (Crocodile) ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂದೀಪ್ ಠಾಕೂರ್ ಮತ್ತು ರಾಜ್ ಭಾವ್ಸಾರ್ ಎಂಬ ಯುವಕರಿಬ್ಬರು ಮೊಸಳೆಯನ್ನು ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ನೀರಿನಲ್ಲಿ ತೇಲಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಮೊಸಳೆಯ ಬಾಯಿಗೆ ಪಟ್ಟಿ ಕಟ್ಟಿ, ಬಳಿಕ ಸ್ಕೂಟಿ ಮೇಲೆ ಅಡ್ಡಲಾಗಿ ಮಲಗಿಸಿಕೊಂಡು ಪ್ರಾಣಿ ರಕ್ಷಣಾ ಸ್ಥಳಕ್ಕೆ ಸಾಗಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ
ಪ್ರವಾಹದಿಂದಾಗಿ ವಡೋದರಾದ (Vadodara) ವಿಶ್ವಾಮಿತ್ರಿ ನದಿಯಿಂದ ಮೊಸಳೆಗಳ ದಂಡೇ ಊರಿಗೆ ನುಗ್ಗಿವೆ. ಮೊಸಳೆ ಜೊತೆಗೆ ಇನ್ನೂ ಹಲವಾರು ಪ್ರಾಣಿಗಳು ಪ್ರವಾಹದಿಂದ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಪ್ರಾಣಿಗಳ ರಕ್ಷಣೆಗೆ ವಡೋದರಾದಲ್ಲಿ ಕೆಲವು ವಸತಿ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ.
ಈವರೆಗೆ ನಗರದಲ್ಲಿ 40 ಮೊಸಳೆಗಳು ಕಂಡುಬಂದಿವೆ. ಈ ಪೈಕಿ 33 ಮೊಸಳೆಗಳನ್ನು ಸುರಕ್ಷಿತವಾಗಿ ನದಿಗೆ ಬಿಡಲಾಗಿದೆ. 5 ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿವೆ. ಎರಡು ಮೊಸಳೆಗಳು ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ವಡೋದರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಞೇಶ್ವರ್ ವ್ಯಾಸ್ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಜೊತೆ ಎನ್‌ಜಿಒ ತಂಡಗಳು ಕೂಡ ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿವೆ. ಹಾಗೆಯೇ ಪ್ರಾಣಿಗಳ ರಕ್ಷಣೆಗೆ ಸಹಾಯವಾಣಿ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್