Tuesday, 17th July 2018

Recent News

ವಿಡಿಯೋ: ಬೆಂಕಿಯಿಂದ ವಾಹನ ಹೊತ್ತಿ ಉರಿದ ಕೆಲವೇ ಕ್ಷಣಗಳ ಮುಂಚೆ ಹೊರಗೆ ಜಿಗಿದ!

ಬೀಜಿಂಗ್: ಚಲಿಸುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದ ಕೆಲವೇ ಕ್ಷಣಗಳ ಮುಂಚೆ ವ್ಯಕ್ತಿಯೊಬ್ಬರು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗುವಾನ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಟ್ರಾಫಿಕ್ ಸಿಗ್ನಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಇದರ ದೃಶ್ಯಾವಳಿ ಸೆರೆಯಾಗಿದೆ.

ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ವಾಹನದಿಂದ ಹೊರಗೆ ಜಿಗಿದು ರಸ್ತೆ ಮೇಲೆ ಬಿದ್ದಿದ್ದಾರೆ. ನಂತರ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ತನ್ನ ಚಪ್ಪಲಿ ಹಾಕಿಕೊಂಡು ಸದ್ಯ ಪ್ರಾಣ ಉಳಿಯಿತಲ್ಲ ಎಂಬಂತೆ ಹೋಗೋದನ್ನ ವಿಡಿಯೋದಲ್ಲಿ ನೋಡಬಹುದು. ಆ ವ್ಯಕ್ತಿ ಹೊರಗೆ ಜಿಗಿದ ಕೆಲವೇ ಕ್ಷಣಗಳಲ್ಲಿ ಆ ವಾಹನ ಪಾರ್ಕಿಂಗ್ ಲಾಟ್ ಕಡೆಗೆ ಹೋಗಿದ್ದು ಬೆಂಕಿಯ ಜ್ವಾಲೆಯಲ್ಲಿ ಧಗಧಗನೆ ಹೊತ್ತಿ ಉರಿದಿದೆ.

ವಿಡಿಯೋ ಜೊತೆಗೆ ನೀಡಿರುವ ವಿವರಣೆಯ ಪ್ರಕಾರ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಆ ವ್ಯಕ್ತಿ ಹೊರಗೆ ಜಿಗಿದಿದ್ದಾರೆ ಎಂದು ಹೇಳಲಾಗಿದೆ. ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಕ್ಕಪಕ್ಕ ಇದ್ದ ಇತರೆ 7 ವಾಹನಗಳಿಗೆ ಹಾನಿಯಾಗಿದೆ. ಆದ್ರೆ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು 30 ನಿಮಿಷಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನ ನಿಯಂತ್ರಿಸಿದ್ದಾರೆ.

Leave a Reply

Your email address will not be published. Required fields are marked *