ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಗಿರಿಕಾನನದ ನಡುವಿನಿಂದ ದುಮ್ಮಿಕ್ಕೋ ಜಲಧಾರೆಗಳ ವಯ್ಯಾರ ನೋಡೋಕೆ ಎರಡು ಕಣ್ಣು ಸಾಲಲ್ಲ. ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮೊದಲ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.
ಸುತ್ತಲೂ ಮುಗಿಲು ಚುಂಬಿಸೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ಕಂಗೊಳಿಸೋ ಪುಷ್ಪಗಿರಿ ಮೀಸಲು ಅರಣ್ಯದ ನಡುವೆ ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುವ ಜಲರಾಶಿ. ಅಪರೂಪದ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿರೋ ಪ್ರವಾಸಿಗರು ಇದು ಕೊಡಗಿನ ಅತಿಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತದ ವಯ್ಯಾರ.
Advertisement
ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿಯ ಈ ಜಲಪಾತ ನೋಡಲು ಸುಂದರ ಅತಿಸುಂದರ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ಮೈದುಂಬಿ ಹರಿಯುತ್ತಿರೋ ಜಲರಾಶಿ ನೋಡುಗರ ಕಣ್ಣು ಕೊರೈಸುತ್ತಿದೆ. ಮುಗಿಲೆತ್ತರದಿಂದ ಹಾಳ್ನೊರೆಯಂತೆ ಇಳಿಯೋ ಜಲಪಾತದ ಸೌಂದರ್ಯ ಬಣ್ಣಿ ಸಲಸದಳ, ಹಸಿರ ನಡುವಿನಿಂದ ಬೋರ್ಗರೆಯುತ್ತಾ ಕರಿಕಲ್ಲುಗಳನ್ನು ಸೀಳಿಕೊಂಡು ರುದ್ರರಮಣೀಯ ಜಲಪಾತವನ್ನು ನೋಡೋದೆ ಅಂದ.
Advertisement
Advertisement
ಅಕ್ಷರಶಃ ಸ್ವರ್ಗಕ್ಕೆ ಕಿಚ್ಚು ಹಚ್ಚುಂತಿರೋ ಇಲ್ಲಿನ ನಿಸರ್ಗದ ಸೌಂದರ್ಯ. ಇದರ ನಡುವೆ ಪ್ರಪಾತದಲ್ಲಿ ಕಾಣೋ ಜಲರಾಶಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. ಪುಷ್ಪಗಿರಿಯ ತಪ್ಪಲಿನಿಂದ ಹುಟ್ಟಿಬರೋ ಕುಮಾರಧಾರಾ ನದಿ ಸೃಷ್ಟಿಸಿರೋ ಈ ಅಪರೂಪದ ಜಲಧಾರೆಯ ಬಳುಕು ಬಿನ್ನಾಣ, ವಯ್ಯಾರದಿಂದ ಸಂಗೀತ ಲೋಕ ಸೃಷ್ಟಿಸಿ ಹರಿಯೋ ನೀರ ಝರಿ ದಣಿದ ಮನಕ್ಕೆ ನೆಮ್ಮದಿ ನೀಡುತ್ತೆ. ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನಿಸೋ ಜಲಪಾತದ ಸೊಬಗು ನಯನ ಮನೋಹರವಾಗಿದೆ.
Advertisement
ಈ ಜಲಪಾತದ ಸೌಂದರ್ಯವನ್ನು ಹತ್ತಿರದಿಂದ ಸವಿಯ ಬೇಕಾದರೆ ನೂರಾರು ಮೆಟ್ಟಿಲುಗಳನ್ನಿಳಿದು ಕೆಲವೇ ಕಿಲೋಮೀಟರ್ ಗಟ್ಟಲೆ ಬೆಟ್ಟವನ್ನಿಳಿಯಬೇಕು. ಇಷ್ಟು ಕಷ್ಟಪಟ್ಟು ಕೆಳಗಿಳಿದರೆ ಸ್ವರ್ಗವೇ ಕಣ್ಣೆದುರಿಗೆ ಬಂದ ಅನುಭವವಾಗುತ್ತೆ. ದುರಂತ ಅಂದ್ರೆ ಇಲ್ಲಿಗೆ ಬರುವ ಪ್ರವಾಸಿಗರು ಸೇಲ್ಫಿ ಕ್ರೇಜ್‍ನಿಂದ ಫೋಟೋ ತೆಗೆಯಲು ಹೋಗಿ ಸುಮಾರು 14 ಮಂದಿ ಈ ಜಲಪಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿ ಪ್ರಿಯರ ಮನತಣಿಸೋ ನಿಸರ್ಗದ ಸೊಬಗು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಮಾಮೂಲಿಯಂತೆ ಅಬ್ಬಿ ಜಲಪಾತ ನೋಡಿ ಹರ್ಷಗೊಳ್ಳೊ ಮನಕ್ಕೆ ಒಮ್ಮೆ ರುದ್ರರಮಣೀಯ ಮಲ್ಲಳ್ಳಿ ಜಲಪಾತದ ದರ್ಶನವಾದರೆ ನಿಜಕ್ಕೂ ಸಂತಸ ಉಕ್ಕಿಬರೋದಂತು ಸುಳ್ಳಲ್ಲ.