ಬೀಜಿಂಗ್: ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ನಿಲ್ದಾಣದಲ್ಲಿದ್ದ ವ್ಯಕ್ತಿಯೊಬ್ಬರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
Advertisement
ಚೀನಾದಲ್ಲಿ ಈ ಘಟನೆ ನಡೆದಿದ್ದು, ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಇದರ ದೃಶ್ಯಾವಳಿ ಸೆರೆಯಾಗಿದೆ. ನಿಲ್ದಾಣದಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹೈ ಸ್ಪೀಡ್ ರೈಲು ಇನ್ನೇನು ನಿಲ್ದಾಣ ತಲುಪಬೇಕು ಎನ್ನುವಷ್ಟರಲ್ಲಿ ಟ್ರ್ಯಾಕ್ ಕಡೆಗೆ ಓಡಿದ್ದಾಳೆ. ಹಿಂದೆ ನಿಂತಿದ್ದ ವ್ಯಕ್ತಿ ಇದನ್ನ ನೋಡಿ ಕೂಡಲೇ ಆಕೆಯ ಕೈ ಹಿಡಿದುಕೊಂಡು ಹಿಂದಕ್ಕೆ ಎಳೆದಿದ್ದಾರೆ. ಯುವತಿಯನ್ನ ರಕ್ಷಿಸುವ ಭರದಲ್ಲಿ ಆ ವ್ಯಕ್ತಿಯ ತಲೆ ನೆಲಕ್ಕೆ ಬಡಿದರೂ ಅವರು ಯುವತಿಯ ಕೈ ಗಟ್ಟಿಯಾಗಿ ಹಿಡಿದು ಎಳೆದಿದ್ದಾರೆ. ಇದಾದ ಮರುಘಳಿಗೆಯೇ ರೈಲು ನಿಲ್ದಾಣ ತಲುಪಿದೆ. ನಂತರ ನಿಲ್ದಾಣದಲ್ಲಿದ್ದ ಮತ್ತಿಬ್ಬರು ಯುವತಿ ಹಾಗೂ ಆಕೆಯ ರಕ್ಷೆಣೆಗೆ ಮುಂದಾದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದಾರೆ.
Advertisement
ಪತ್ರಿಕೆಯೊಂದರ ವರದಿಯ ಪ್ರಕಾರ ಈ ಘಟನೆ ಮೇ 10 ರಂದು ಫುಜಿಯಾನ್ ಪ್ರಾಂತ್ಯದ ಪುಟಿಯನ್ ನಿಲ್ದಾಣದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಯುವತಿಯನ್ನ ರಕ್ಷಿಸಿದ ವ್ಯಕ್ತಿ ರೈಲ್ವೆ ಸಿಬ್ಬಂದಿಯಾಗಿದ್ದು, ಯುವತಿಯನ್ನ ರಕ್ಷಿಸುವ ಮಧ್ಯೆ ಅವರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ.