– ಜೈನ ಅರ್ಚಕನ ವೇಷದಲ್ಲಿ ಬಂದ ಕಳ್ಳನಿಂದ ಕೃತ್ಯ
ನವದೆಹಲಿ: ಐತಿಹಾಸಿಕ ಕೆಂಪು ಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ (Jain Event) 1.5 ಕೋಟಿ ಮೌಲ್ಯದ ಎರಡು ಚಿನ್ನದ ಕಲಶ (Golden Kalash) ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅರ್ಚಕನ (Jain Priest) ವೇಷದಲ್ಲಿ ಬಂದ ಕಳ್ಳ ಬೆಲೆಬಾಳುವ ವಸ್ತುಗಳನ್ನ ದೋಚಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಈಗ ವೈರಲ್ ಆಗಿದೆ. ಕಳ್ಳ ಅರ್ಚಕನನ್ನ ಗುರುತಿಸಿದ್ದು. ಶೀಘ್ರದಲ್ಲೇ ಆತನನ್ನ ಬಂಧಿಸುವುದಾಗಿ ಪೊಲೀಸರು (Delhi Police) ತಿಳಿಸಿದ್ದಾರೆ. ಇದನ್ನೂ ಓದಿ: ಹನಿಮೂನ್ ಮರ್ಡರ್ ಕೇಸ್ | 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಕೊಲೆಯಾದ ರಘುವಂಶಿ ಪತ್ನಿಯೇ ಪ್ರಮುಖ ಆರೋಪಿ
ಏನೇನು ಕಳ್ಳತನ?
ಕಳ್ಳ ಅರ್ಚಕ ಕದ್ದ ವಸ್ತುಗಳಲ್ಲಿ ಚಿನ್ನದ ಜರಿ (ಕಲಶ), ಸುಮಾರು 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ (ಕಲಸದ ಮೇಲಿಡುವ ತೆಂಗು ಮಾದರಿ ವಸ್ತು), ವಜ್ರಗಳು, ರತ್ನ ಹಾಗೂ ಮಾಣಿಕ್ಯಗಳಿಂದ ಕೂಡಿದ ಸಣ್ಣ ಗಾತ್ರದ 115 ಗ್ರಾಂ ಚಿನ್ನದ ಕಲಶ ಸೇರಿವೆ.
ಈ ವಸ್ತುಗಳೆಲ್ಲವು ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿದ್ದಾಗಿದೆ. ಪ್ರತಿದಿನ ಅವರು ಆಚರಣೆಗಳಿಗಾಗಿ ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದರು ಎನ್ನಲಾಗಿದೆ. ಈ ವಸ್ತುಗಳನ್ನು ಪೂಜಾ ಕೈಂಕರ್ಯ, ಆಚರಣೆಗಳಲ್ಲಿ ಬಳಸುವುದು ಪವಿತ್ರ ಹಾಗೂ ಶ್ರೇಷ್ಠ ಅನ್ನೋದು ಜೈನರ ನಂಬಿಕೆ. ಇದನ್ನೂ ಓದಿ: ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR
ಕಳ್ಳತನ ಆಗಿದ್ದು ಯಾವಾಗ?
ಕೆಂಪುಕೋಟೆ ಆವರಣದಲ್ಲಿರುವ ಪಾರ್ಕ್‌ನಲ್ಲಿ ʻದಶಲಕ್ಷಣ ಮಹಾಪರ್ವʼ ಹೆಸರಿನಲ್ಲಿ ಆ.15 ರಿಂದ ಸೆ.9ರ ವರೆಗೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜೈನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಶೇಷ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಜೈನ ಅರ್ಚಕನ ವೇಷದಲ್ಲಿ ಬಂದ ವ್ಯಕ್ತಿ ಬೆಲೆ ಬಾಳುವ ವಸ್ತುಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಆಯೋಜಕರು ಗಣ್ಯರನ್ನು ಸ್ವಾಗತಿಸುವ ಭರದಲ್ಲಿದ್ದಾಗ ವ್ಯಕ್ತಿ ವಸ್ತುಗಳನ್ನ ದೋಚಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜೈನ ಸಮುದಾಯದ ಮುಖಂಡರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಲಶವು ಕೇವಲ ಆರ್ಥಿಕ ಮೌಲ್ಯ ಮಾತ್ರವಲ್ಲದೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿತ್ತು. ಇಂತಹ ಘಟನೆಯು ಜೈನ ಸಮುದಾಯಕ್ಕೆ ಆಘಾತಕಾರಿಯಾಗಿದೆ. ಕೆಂಪು ಕೋಟೆಯಂತಹ ಸ್ಥಳದಲ್ಲಿ ಇದು ಸಂಭವಿಸಿರುವುದು ಆತಂಕಕಾರಿಯಾಗಿದೆ. ಪೊಲೀಸರು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಕಲಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್