– 29 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ತಿರುವನಂತಪುರಂ: ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು (Elephant) ನಿಯಂತ್ರಣ ಕಳೆದುಕೊಂಡು ಏಕಾಏಕಿ ಜನರ ಗುಂಪಿನ ಮೇಲೆ ದಾಳಿ ನಡೆಸಿದ ಪರಿಣಾಮ 29 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ (Malappuram) ಜಿಲ್ಲೆಯ ತಿರೂರಿನಲ್ಲಿ ನಡೆದಿದೆ.
ವಾದ್ಯಗಳ ಸದ್ದು, ಜನರ ಗದ್ದಲದ ನಡುವೆ ನಿಯಂತ್ರಣ ಕಳೆದುಕೊಂಡ ಪಾಕ್ಕಾತು ಶ್ರೀಕುಟ್ಟನ್ (Paakkath Sreekuttan) ಹೆಸರಿನ ಆನೆ, ವ್ಯಕ್ತಿಯೊಬ್ಬನನ್ನ ಎತ್ತಿ ಎಸೆದಿದೆ. ಈ ವೇಳೆ ಗುಂಪಿನಲ್ಲಿದ್ದ ಜನ ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಕೆಲವರು ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ನಸುಕಿನ 2:30ರ ಸುಮಾರಿಗೆ ಮಾವುತ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಘಟನೆಯಲ್ಲಿ ಸುಮಾರು 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಉತ್ಸವದಲ್ಲಿ ಕನಿಷ್ಠ ಐದು ಆನೆಗಳು ಅಂಲಕಾರಭೂಷಿತವಾಗಿ ಪಾಲ್ಗೊಂಡಿದ್ದವು. ಈ ವೇಳೆ ಹಠಾತ್ತನೆ ಜನರ ಕಡೆಗೆ ನುಗ್ಗಿದ್ದ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ ದಾಳಿ ನಡೆಸಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಮೂಲಗಳ ಪ್ರಕಾರ, ಆನೆ ದಾಳಿಗೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.