ಶಿವಮೊಗ್ಗ: ಮಲೆನಾಡು ಕ್ರಮೇಣ ಮಳೆನಾಡಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಮಲೆನಾಡಿನ ನದಿಗಳು ಮೈದುಂಬಿಕೊಂಡಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಸಹ ತುಂಬಿ ಹರಿಯುತ್ತಿದೆ.
ದಟ್ಟ ಮೋಡ, ಮಂಜಿನ ನಡುವೆ ಬಿಸಿಲು ಬಿದ್ದು, ಕಂಡು ಕಾಣದಂತೆ ಮರೆಯಾಗುವ ಜಲಪಾತ ನೋಡುಗರ ಕಣ್ಣಿಗೆ ಹಬ್ಬವಾಗಿದೆ. ರಾಜಾ, ರೋರರ್, ರಾಕೆಟ್, ರಾಣಿ ಧುಮ್ಮಿಕ್ಕುತ್ತಿದ್ದು ಜೋಗದ ಗುಂಡಿ ನೋಡಲು ಎರಡೂ ಕಣ್ಣು ಸಾಲದಂತಾಗಿದೆ.
Advertisement
Advertisement
ಮುಂಭಾಗದಿಂದ ಸಹಜ ಸುಂದರವಾಗಿ ಕಾಣುವ ಜಲಪಾತ ಅತ್ತ ಮದ್ರಾಸ್ ಐಬಿ ಕಡೆಯಿಂದ ರುದ್ರ ರಮಣೀಯವಾಗಿ ಕಾಣುತ್ತಿದೆ. ಜಲಪಾತದ ನೆತ್ತಿಯಲ್ಲಿ ನಿಂತು ನೋಡುವುದು ರೋಮಾಂಚನಕಾರಿ ಆಗಿ ಕಾಣುತ್ತದೆ.
Advertisement
ಶರಾವತಿ ನದಿ ಜಲಾನಯನ ಪ್ರದೇಶಗಳಾದ ಹೊಸನಗರ, ಸಾಗರ ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಆಗುತ್ತಿರುವುದು ಜಲಪಾತ ಕಳೆಕಟ್ಟಲು ಕಾರಣವಾಗಿದೆ.