ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

Public TV
2 Min Read
india pakistan flag

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.

ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

India Vs Pakistan Cricket copy

ಒಪ್ಪಂದದಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿ ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು.

2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ (ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ 6 ಕ್ರಿಕೆಟ್ ಸರಣಿ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಹಿಂದೆ ಹೇಳಿದ್ದರು.

bcci 1

ಪಾಕಿಸ್ತಾನದ ಉಗ್ರಗಾಮಿಗಳು 2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ-ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

ಐಸಿಸಿ ತಿಳಿಸಿರುವ ಪ್ರಕಾರ ಈ ಪ್ರಕರಣವನ್ನ ಇಲ್ಲಿಯೇ ಕೈಬಿಡುವಂತೆ ಪಾಕಿಸ್ತಾನಕ್ಕೆ ತಿಳಿಸಿದ್ದು, ಹೀಗಾಗಿ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಕಾನೂನು ಸಮರದಲ್ಲಿ ಬ್ರೇಕ್ ಬಿದ್ದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಚಿ ಅನಿರುಧ್ ಚೌಧರಿ ಅವರು, ಐಸಿಸಿ ನೀಡಿರುವ ತೀರ್ಮಾನದ ಸಂಪೂರ್ಣ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಪ್ರಕರಣದಲ್ಲಿ ಬಿಸಿಸಿಐ ಪರ ನಿಂತ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

ind vs pak

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *