-ನವನಗರದಲ್ಲಿ ಹೈಟೆಕ್ ವ್ಯವಸ್ಥೆ
ಹುಬ್ಬಳ್ಳಿ: ಮಹಾನಗರಗಳಲ್ಲಿ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಹೆಚ್.ಡಿ.ಬಿ.ಆರ್.ಟಿ.ಎಸ್. ಹುಬ್ಬಳ್ಳಿ ಧಾರವಾಡ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್‌ಟಿಸಿ) ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.
ಉಪರಾಷ್ಟ್ರಪತಿಯವರಾದ ಎಂ.ವೆಂಕಯ್ಯನಾಯ್ಡು ಫೆ.02 ರಂದು ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಲವು ವಿಶೇಷತೆಗಳಿಂದ ಕೂಡಿರುವ ತ್ವರಿತ ಬಸ್ ಸೇವೆ ಸಾರ್ವಜನಿಕ ವಲಯದ ಮೊದಲ ಅತ್ಯುತ್ತಮ ಪರಿಸರಸ್ನೇಹಿ ಹಾಗೂ ಜನಸ್ನೇಹಿ ವ್ಯವಸ್ಥೆ ಎಂಬ ಹೆಮ್ಮೆಯನ್ನು ತನ್ನದಾಗಿಸಿಕೊಂಡಿದೆ.
Advertisement
Advertisement
ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ತ್ವರಿತ ಬಸ್ ಸೇವೆಯನ್ನು ಅನುಷ್ಠಾನಗೊಳಿಸುತ್ತಿರುವುದು ಇದೇ ಮೊದಲು. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಸುಸ್ಥಿರ ನಗರ ಸಾರಿಗೆ ಯೋಜನೆ ಹಾಗೂ ಜಾಗತಿಕ ಪರಿಸರ ಸೌಲಭ್ಯ ಮತ್ತು ವಿಶ್ವ ಬ್ಯಾಂಕ್ ಜಂಟಿ ಯೋಜನೆಯಾಗಿ ಸುಮಾರು 970.87 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರದ 624.06 ಕೋಟಿ, ವಿಶ್ವ ಬ್ಯಾಂಕ್ ಸಾಲ 324.32 ಕೋಟಿ, 24.49ಕೋಟಿ ಜಿ.ಇ.ಎಫ್ ಅನುದಾನ ಒಳಗೊಂಡಿದೆ.
Advertisement
ಯೋಜನೆಯ ದೊಡ್ಡ ಪಾಲಾಗಿ 445.59 ಕೋಟಿ ರೂಪಾಯಿಗಳನ್ನು ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಳಸಲಾಗಿದೆ. 356.82 ಕೋಟಿ ರೂಪಾಯಿಗಳನ್ನು ಭೂ ಸ್ವಾಧೀನ ಹಾಗೂ ಪುನರ್ವಸತಿ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. 147.97 ಮತ್ತು 24.49 ಕೋಟಿ ರೂಪಾಯಿಗಳನ್ನು ಕ್ರಮವಾಗಿ ಸರಕು ಮತ್ತು ಯಂತ್ರಗಳ ಖರೀದಿ ಮತ್ತು ಸಲಹಾ ಸೇವೆಗಳಿಗೆ ವೆಚ್ಚ ಮಾಡಲಾಗಿದೆ.
Advertisement
ಹೆಚ್.ಡಿ.ಬಿ.ಆರ್.ಟಿಎಸ್ ಕಂಪನಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (JNURM) ಅಡಿ 100 ಹವಾನಿಯಂತ್ರಿತ ಬಸ್ ಖರೀದಿಸಲಾಗಿದೆ. ಅವಳಿ ನಗರಗಳ ಮಧ್ಯ 32 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೂ 6 ಪಾದಚಾರಿ ಮೇಲು ಸೇತುವೆಗಳು, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿ ಇಂಟರ್ ಚೇಂಜ್, ಬಸ್ ಡಿಪೋ, ಕಚೇರಿ ಮತ್ತು ನಿಯಂತ್ರಣ ಕೇಂದ್ರಗಳಿವೆ. 2.5 ಎಕರೆ ಪ್ರದೇಶದಲ್ಲಿ ಉಪನಗರ ಸಾರಿಗೆ ಸೇವೆ ಒದಗಿಸಲು ಯೋಜಿಸಲಾಗಿದೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ 40 ಬಸ್ ಸಾಮರ್ಥ್ಯದ ಡಿಪೋ ಹಾಗೂ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ 113 ಬಸ್ ಸಾಮರ್ಥ್ಯದ ಡಿಪೋ ನಿರ್ಮಿಸಲಾಗಿದೆ.
ಐಟಿಎಸ್: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಜಾರಿಗೊಳಿಸಿದೆ. ಸ್ವಯಂಚಾಲಿತ ಟಿಕೆಟ್ ಸಂಗ್ರಹ, ಪ್ರಯಾಣಿಕರಿಗೆ ಬಸ್ ಸಂಚಾರದ ಕುರಿತಾದ ಮಾಹಿತಿ ವ್ಯವಸ್ಥೆ, ಸಿಸಿಟಿವಿ ವಿಡಿಯೋ ವಾಲ್‍ಗಳ ಬೃಹತ್ ಜಾಲ ಹೊಂದಿದೆ.
ಹಸಿರು ಹೆಚ್.ಡಿ.ಬಿ.ಅರ್.ಟಿ.ಎಸ್: ಯೋಜನೆ ಅನುಷ್ಠಾನಕ್ಕೆ ಸಾವಿರಾರು ಗಿಡಗಳನ್ನು ತೆರವುಗೊಳಿಸಿರುವುದಕ್ಕೆ ಬದಲಾಗಿ ಅವಳಿ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 25 ಸಾವಿರಕ್ಕೂ ಅಧಿಕ ಗಿಡಗಳನ್ನು ಐದು ವರ್ಷದಲ್ಲಿ ಬೆಳೆಸುವ ಗುರಿ ಹೊಂದಿದೆ. ಈಗಾಗಲೇ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯ ಅನುಷ್ಠಾನಗೊಂಡಿದೆ.
ಕಾರ್ಯಾಚರಣೆ: ಹೆಚ್.ಡಿ.ಬಿ.ಆರ್.ಟಿ.ಎಸ್ ಯೋಜನೆಯು 2018 ಅಕ್ಟೋಬರ್ 2 ರಿಂದ ಪ್ರಾಯೋಗಿಕವಾಗಿ ಜನರಿಗೆ ಸೇವೆ ಒದಗಿಸುತ್ತಿದೆ. ಹಂತ ಹಂತವಾಗಿ ನೂರು ಬಸ್‍ಗಳು ಪ್ರತಿನಿತ್ಯ 1,204 ಟ್ರಿಪ್‍ಗಳಲ್ಲಿ ಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿರುವುದರಿಂದ ನಗರದ ಸಂಚಾರ ದಟ್ಟಣೆ ತಗ್ಗಿದೆ. ಇದರಿಂದ ಪರಿಸರಕ್ಕೆ ಸಾಕಷ್ಟು ಲಾಭವಾಗುತ್ತಿದೆ. ಇಂಧನ ಬಳಕೆ ಇಳಿಮುಖವಾಗಿದೆ. ಈ ಸೇವೆಯಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಪತ್ರಿನಿತ್ಯ ಟಿಕೆಟ್ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.
ಮೆಟ್ರೋಗಿಂತ ಕಡಿಮೆ ವೆಚ್ಚ: ಬಿ.ಆರ್.ಟಿ.ಎಸ್. ಹಲವು ವಿಚಾರದಲ್ಲಿ ಮೆಟ್ರೋ ಸೇವೆಗಿಂತ ಅತ್ಯಂತ ಕಡಿಮೆ ಖರ್ಚಿನದಾಗಿದೆ. ಮೆಟ್ರೋ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ರಿಂದ 400 ಕೋಟಿ ರೂ. ವೆಚ್ಚ ತಗುಲಿದರೆ, ಬಿ.ಆರ್.ಟಿ.ಎಸ್ ನಲ್ಲಿ ಈ ವೆಚ್ಚ ಪ್ರತಿ ಕಿ.ಮೀ.ಗೆ 25 ರಿಂದ 30 ಕೋಟಿ ರೂಪಾಯಿಗಳಾಗುತ್ತಿದೆ. ನಿರ್ವಹಣಾ ವೆಚ್ಚವೂ ಮೆಟ್ರೋಗಿಂತ ಶೇ.90 ರಷ್ಟು ಕಡಿಮೆ. ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಲಕ್ನೋ ನಗರದ ಬಿ.ಆರ್.ಟಿ.ಎಸ್. ಪ್ರತಿನಿತ್ಯ 60 ರಿಂದ 70 ಸಾವಿರ ಜನರಿಗೆ ಸೇವೆ ನೀಡುತ್ತಿದ್ದರೆ, ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್ 1 ಲಕ್ಷ ಜನರಿಗೆ ಸೇವೆ ಒದಗಿಸುತ್ತಿದೆ.
ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆಯನ್ನು ಬಿ.ಆರ್.ಟಿ.ಎಸ್ ಮೂಲಕ ಜನರಿಗೆ ನೀಡಲಾಗುತ್ತಿದೆ. ಬಿ.ಎಂ.ಟಿ.ಸಿ ನಗರ ಸಾರಿಗೆಯಲ್ಲಿ ಎ.ಸಿ. ಬಸ್‍ಗಳಲ್ಲಿ ಪ್ರತಿ ಕಿ.ಮೀ.ಗೆ 3 ರೂಪಾಯಿ 72 ಪೈಸೆ ದರ ವಿಧಿಸಲಾಗುತ್ತಿದೆ. ಬಿ.ಆರ್.ಟಿ.ಎಸ್‍ನಲ್ಲಿ ಪ್ರತಿ ಕಿ.ಮೀ. 1 ರೂಪಾಯಿ 18 ಪೈಸೆ ದರ ನಿಗದಿ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ಲಭಿಸುತ್ತಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಯಾವುದೇ ನಷ್ಟ ಹಾಗೂ ಲಾಭಗಳಿಲ್ಲದೆ ನಡೆಸಲಾಗುತ್ತಿದೆ.