ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲವಾದರೂ ಅವರು ಸಾಲದ ಸುಳಿಗೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.
ಮಾಧ್ಯಮಗಳ ವರದಿ ಪ್ರಕಾರ 2019ರ ಮಾರ್ಚ್ ವೇಳೆ ಸಿದ್ಧಾರ್ಥ್ ಅವರು ಒಟ್ಟು 6,500 ಕೋಟಿ ರೂ. ಸಾಲದಲ್ಲಿದ್ದರು. ಈ ಸಾಲ ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.
Advertisement
Advertisement
ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ ‘ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.
Advertisement
ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.
Advertisement
ಮೈಂಡ್ ಟ್ರೀ ಷೇರು ಎಷ್ಟಿತ್ತು?
2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.
2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್‍ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.
ಷೇರು ಬೆಲೆ ಇಳಿಕೆ: ವಿಜಿ ಸಿದ್ಧಾರ್ಥ್ ನಾಪತ್ತೆಯಾದ ಬೆನ್ನಲ್ಲೇ ಕೆಫೆ ಕಾಫಿ ಡೇ ಕಂಪನಿಯ ಷೇರು ಮೌಲ್ಯ ಶೇ.20ರಷ್ಟು ಇಳಿಕೆಯಾಗಿದೆ. 2018ರ ಸಪ್ಟೆಂಬರ್ ತಿಂಗಳಿನಲ್ಲಿ ಒಂದು ಷೇರಿನ ಮೌಲ್ಯ ಗರಿಷ್ಟ 325 ರೂ.ಗೆ ಏರಿಕೆಯಾಗಿದ್ದರೆ ಮಂಗಳವಾರ ಬೆಳಗ್ಗೆ 154.05 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸೋಮವಾರದ ಮುಕ್ತಾಯಕ್ಕೆ 192 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಷೇರು ಇಂದು 38 ರೂ.ಗೆ ಕುಸಿದಿದೆ.
ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.
ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್‍ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.
https://www.youtube.com/watch?v=S8AvtIh5VB8