ಉಡುಪಿ: ಖ್ಯಾತ ಬರಹಗಾರ, ಜಾಗತಿಕ ಸಾಹಿತ್ಯ ಅಧ್ಯಯನಕಾರ, ಹಿರಿಯ ಎಡಪಂಥೀಯ ಚಿಂತಕ ಜಿ. ರಾಜಶೇಖರ್ ಅಂತಿಮಕ್ರಿಯೆ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆಯಿತು. ನೂರಾರು ಅಭಿಮಾನಿಗಳು ಆಗಮಿಸಿ ಕೆಂಪು ವಂದನೆ ಸಲ್ಲಿಸಿ ಅಂತಿಮ ದರ್ಶನ ಪಡೆದರು.
ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರು ರಾಜ್ಯದ ಉತ್ತಮ ಸಾಹಿತ್ಯ ವಿಮರ್ಶಕ ಎಂದು ಪ್ರಖ್ಯಾತಿ ಗಳಿಸಿದ್ದರು. ಯಶವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಮೊದಲಾದವರ ಸಮಕಾಲೀನರಾಗಿ ಅವರ ಖ್ಯಾತ ಕೃತಿಗಳಿಗೆ ಮುನ್ನುಡಿ ಬರೆದಿರುವ ರಾಜಶೇಖರ್ ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಆ ಬಳಿಕ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಕರಾವಳಿಯ ಕೋಮುವಾದಿ ಶಕ್ತಿಗಳ ವಿರುದ್ಧ ಸತ್ಯಶೋಧನಾ ವರದಿಗಳನ್ನು ಮಂಡನೆ ಮಾಡಿದ್ದರು. ಇದನ್ನೂ ಓದಿ: 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ – ದೇಶದ ಪ್ರಥಮ ಪ್ರಜೆಯಾದ ಬುಡಕಟ್ಟು ಮಹಿಳೆ
ಕಾರ್ಮಿಕ ಸಂಘಟನೆಗಳ ಮೂಲಕ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಕರಾವಳಿಯಲ್ಲಿ ಹೋರಾಟ ಸಂಘಟಿಸಿ ಚಳವಳಿ ನಡೆಸಿದ್ದರು. ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರಿ ಸ್ವಾಮ್ಯಕ್ಕೆ ಮುಂದಾದಾಗ ರಾಜಶೇಖರ್ ಅವರು ಅದರ ವಿರುದ್ಧ ಮಾತನಾಡಿ, ಕೃಷ್ಣಮಠ ಅಷ್ಟಮಠದ ಅಧೀನದಲ್ಲಿದ್ದರೆ ವ್ಯವಸ್ಥೆಗಳು ಸರಿಯಾಗಿರುತ್ತದೆ ಎಂದು ಬರೆದಿದ್ದ ವಾದ, ಪತ್ರ ದೇಶಾದ್ಯಂತ ಗಮನ ಸೆಳೆದಿತ್ತು. ಇದನ್ನೂ ಓದಿ: ನೆರೆ ರಾಜ್ಯ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ; ಕರ್ನಾಟಕದಲ್ಲಿ ಹೈ ಅಲರ್ಟ್ – ಮಾರ್ಗಸೂಚಿ ಪ್ರಕಟ
ಬಹುವಚನ ಭಾರತ ಸೇರಿದಂತೆ ಆರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಜಿ. ರಾಜಶೇಖರ್ ಮನೆಗೆ ನೂರಾರು ಅಭಿಮಾನಿಗಳು ಆಗಮಿಸಿ ಲಾಲ್ ಸಲಾಂ ಮೂಲಕ ಅಂತಿಮ ನಮನ ಸಲ್ಲಿಸಿದರು. ರಾಜಶೇಖರ್ ಪತ್ನಿ ಇಬ್ಬರು ಮಕ್ಕಳು ಮತ್ತು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಉಡುಪಿಯ ದಲಿತ ಸಂಘಟನೆಗಳು ಮೃತ ಶರೀರದ ಮೇಲೆ ತಮ್ಮ ಪತಾಕೆ ಇಟ್ಟು ಗೌರವ ಸಲ್ಲಿಸಿದವು. ಜಿಲ್ಲಾ ಕಾಂಗ್ರೆಸ್ ನಾಯಕರು, ಜಿಲ್ಲಾ ಮುಸಲ್ಮಾನ ಒಕ್ಕೂಟ ಸದಸ್ಯರು, ಸಹಬಾಳ್ವೆ ಸಂಘಟನೆ ಕಾರ್ಯಕರ್ತರು ಅಂತ್ಯಸಂಸ್ಕಾರ ಸಂದರ್ಭ ಹಾಜರಿದ್ದರು.