ಬೆಂಗಳೂರು: ಹಿರಿಯ ನಟಿ ಡಾ. ಲೀಲಾವತಿ ಅವರು ಬಡವರಿಗಾಗಿ ನಿರ್ಮಿಸಿದ್ದ ಆಸ್ಪತ್ರೆಯಲ್ಲಿ ಕಿಡಿಗೇಡಿಗಳ ದಾಂಧಲೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಡಿ.ಎಚ್.ಓ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಗ್ರಾಮಾಂತರ ಪ್ರದೇಶದ ಬಡವರ ಅನುಕೂಲಕ್ಕಾಗಿ ಹಿರಿಯ ನಟಿ ಡಾ.ಲೀಲಾವತಿ ಸ್ವಂತ ಖರ್ಚಿನಲ್ಲಿ ಪ್ರಾಥಮಿಕ ಆಸ್ಪತ್ರೆಯನ್ನ ನಿರ್ಮಿಸಿದ್ದರು. ಆದರೆ ಕೆಲ ಕಿಡಿಗೇಡಿಗಳು ಆಸ್ಪತ್ರೆಯ ಮೇಲ್ಛಾವಣಿ ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಔಷಧಿಗಳನ್ನ ಹೊರಗಡೆ ಬಿಸಾಡಿದ್ದರು. ಸೋಮವಾರದಂದು ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದವು. ಸುದ್ದಿಯಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಡಿ.ಎಚ್.ಓ ರಾಜೇಶ್, ಲೀಲಾವತಿ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
Advertisement
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಹಿರಿಯ ನಟಿ ಲೀಲಾವತಿಯವರ ಮನೆಗೆ ತೆರಳಿದ ಡಿ.ಎಚ್.ಓ ರಾಜೇಶ್, ಘಟನೆಯ ಬಗ್ಗೆ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಜೊತೆ ಚರ್ಚೆ ನಡೆಸಿದ್ದಾರೆ.
Advertisement
ಮುಂದಿನ ದಿನಗಳಲ್ಲಿ ಈ ಪ್ರಾಥಮಿಕ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗುವುದು ಹಾಗೂ ಆಸ್ಪತ್ರೆಯ ಸುತ್ತ ಸಿಸಿ ಕ್ಯಾಮರಾಗಳನ್ನ ಅಳವಡಿಸಿ, ಓರ್ವ ಸೆಕ್ಯೂರಿಟಿಯನ್ನ ಇಲಾಖೆಯ ವತಿಯಿಂದ ನೇಮಕ ಮಾಡಲಾಗುವುದು. ಈ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಹಿರಿಯ ನಟಿ ಲೀಲಾವತಿ ಘಟನೆಯಿಂದ ನನ್ನ ಮನಸಿಗೆ ತುಂಬಾ ನೋವಾಗಿತ್ತು. ಆದರೆ ಮಾಧ್ಯಮಗಳ ಬೆಂಬಲದಿಂದ ಇಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಯ ನವೀಕರಣಕ್ಕೆ ಮನಸ್ಸು ಮಾಡಿದ್ದಾರೆ. ಇದರಿಂದ ನನಗೆ ಸ್ವರ್ಗವೇ ಸಿಕ್ಕಂತಾಗಿದೆ ಎಂದು ತಮ್ಮ ಮನಸ್ಸಿನ ಭಾವನೆಯನ್ನ ಮಾಧ್ಯಮದವರೊಂದಿಗೆ ಹಂಚಿಕೊಂಡರು.