ಸ್ಯಾಂಡಲ್ ವುಡ್ ನ ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಚುನಾವಣೆಗೆ ಸ್ಪರ್ಧಿಸಿದ್ದರು ಎನ್ನುವ ವಿಚಾರ ತುಂಬಾ ಜನಕ್ಕೆ ಗೊತ್ತಿಲ್ಲ. ಸರ್ವೆ ಇಲಾಖೆಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್ ಆಗಿದ್ದ ಶ್ರೀನಿವಾಸ್ ಮೂರ್ತಿ ಅವರನ್ನು ಎಂ.ಎಲ್.ಎ ಎಲೆಕ್ಷನ್ ಗೆ ನಿಲ್ಲಿಸಿದ್ದು ಬೇರೆ ಯಾರೂ ಅಲ್ಲ, ಹೆಚ್.ಡಿ ದೇವೇಗೌಡರು (H.D. Devegowda). ಈ ರೋಚಕ ವಿಷಯವನ್ನು ಸ್ವತಃ ಶ್ರೀನಿವಾಸ್ ಮೂರ್ತಿ ಅವರೇ ಹಂಚಿಕೊಂಡಿದ್ದಾರೆ.
ಅದು 1973ರ ಸಮಯ. ಆಗ ಶ್ರೀನಿವಾಸ್ ಮೂರ್ತಿ ಅವರು ಸರ್ವೆ ಇಲಾಖೆಯಲ್ಲಿ ಎಸ್.ಡಿ.ಸಿ ಆಗಿದ್ದರು. ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದರು. ಶ್ರೀನಿವಾಸ್ ಮೂರ್ತಿ ಅವರ ಜನಪ್ರಿಯತೆ ಹಾಗೂ ಅವರದ್ದೇ ಜಾತಿಯ ಜನರು ಹೆಚ್ಚಿರುವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಬೇಕು ಎಂದು ದೇವೇಗೌಡ ಲೆಕ್ಕಾಚಾರವಾಗಿತ್ತು. ಅದರಂತೆ ಶ್ರೀನಿವಾಸ್ ಮೂರ್ತಿ ಅವರ ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ಕುರಿತು ಮಾತನಾಡಿರುವ ಶ್ರೀನಿವಾಸ್ ಮೂರ್ತಿ, ‘ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವನನ್ನು ರಾಜೀನಾಮೆ ಕೊಡಿಸಿ ದೊಡ್ಡಬಳ್ಳಾಪುರ (Doddaballapur) ಕ್ಷೇತ್ರದಲ್ಲಿ ಎಂ.ಎಲ್.ಎ ಗೆ ನಿಲ್ಲಿಸಿದರು. ನಮ್ಮದೇ ಜಾತಿಯವರು ವೋಟು ಹಾಕುತ್ತಾರೆ ಎನ್ನುವ ಲೆಕ್ಕಾಚಾರ ದೇವೇಗೌಡರದ್ದಾಗಿತ್ತು. ರಾಜಕೀಯ ಅನುಭವ ಇಲ್ಲದ್ದಾಗಿದ್ದರಿಂದ ಸೋಲಬೇಕಾಯಿತು’ ಎಂದಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್
ಅಂದಹಾಗೆ ಶ್ರೀನಿವಾಸ್ ಮೂರ್ತಿಯವರು ಸ್ಪರ್ಧಿಸಿದ್ದು ಆರ್.ಎಲ್ ಜಾಲಪ್ಪ (R.L. Jalappa) ಎದುರಾಗಿ. ಆ ವೇಳೆಯಲ್ಲಿ ಜಾಲಪ್ಪನವರು ಆ ಕ್ಷೇತ್ರದ ಜನರಿಗೆ ಬೇಕಾಗಿದ್ದೆಲ್ಲವನ್ನೂ ಮಾಡಿಕೊಟ್ಟಿದ್ದರು. ಅದರಲ್ಲೂ ನೇಕಾರರೇ ಅಲ್ಲಿ ಹೆಚ್ಚಿನ ಮತದಾರರು. ಅವರಿಗೂ ಸಾಕಷ್ಟು ಸಹಾಯ ಮಾಡಿದ್ದರು. ಹೀಗಾಗಿ ಶ್ರೀನಿವಾಸ್ ಮೂರ್ತಿ ಅವರಿಗೆ ಬೀಳಬೇಕಾಗಿದ್ದ ವೋಟು, ಜಾಲಪ್ಪನವರಿಗೆ ಬಿದ್ದಿದ್ದವು.