ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇ ಬಾಗಿಲು ಸೇತುವೆ ಮೇಲಿನ ತುಂಗಭದ್ರಾ ನದಿಯ ರಮಣೀಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಲೈಯಿಂಗ್ ಐ ಬೈ ಅರ್ಜುನ್ ಎಂಬ ಹೆಸರಿನ ಡ್ರೋನ್ ಕ್ಯಾಮೆರಾ ಮೂಲಕ ತುಂಗಭದ್ರಾ ನದಿಗೆ ನಿರ್ಮಿಸಿದ ಸೇತುವೆ ಮೇಲಿಂದ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಬರೋಬ್ಬರಿ 5 ವರ್ಷದ ನಂತರ ತುಂಗಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹೊರ ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ನದಿಯ ಮತ್ತು ಸುತ್ತಲಿನ ನಿಸರ್ಗ ಪ್ರದೇಶವನ್ನು ಸೆರೆ ಹಿಡಿಯಲಾಗಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ವಿಹಂಗಮ ದೃಶ್ಯವನ್ನು ಅರ್ಜುನ್ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ತುಂಗಾಭದ್ರಾ ಜಲಾಶಯ ಈ ಬಾರಿ ಮತ್ತೆ ಮೈದುಂಬಿ ಹರಿಯುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯವೀಗ ಮೈದುಂಬಿಕೊಂಡಿದೆ. ಕಳೆದ ದಿನದಿಂದ 32 ಕ್ರಷ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳಿಂದ 60 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ. ಆದ್ದರಿಂದ ಜಲಾಶಯದಿಂದ ನೀರು ಬಿಟ್ಟ ದೃಶ್ಯವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.