ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಬದಲು ಸಿಬಿಐಗೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಆದೇಶ ಶುಕ್ರವಾರ ಹೊರಬೀಳಲಿದೆ. ಅದೇ ರೀತಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S.Yediyurappa) ವಿರುದ್ಧದ ಪೋಕ್ಸೋ ಕೇಸ್ (POCSO Case) ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ಆದೇಶ ಸಹ ಹೊರ ಬೀಳಲಿದೆ.
ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ್ದ ಧಾರವಾಡ ಹೈಕೋರ್ಟ್ ಪೀಠ ಆದೇಶವನ್ನು ಫೆ7ರ ಬೆಳಗ್ಗೆ 10:30ಕ್ಕೆ ಕಾಯ್ದಿರಿಸಿತ್ತು. ಪ್ರತಿ ಹಂತದಲ್ಲೂ ಲೋಕಾಯುಕ್ತದ ತನಿಖಾ ವರದಿಯನ್ನು ಪಡೆದಿರೋ ಹೈಕೋರ್ಟ್, ಎಲ್ಲವನ್ನೂ ಪರಿಶಿಲಿಸಿದೆ.
ಹೈಕೋರ್ಟ್ ನೀಡಲಿರುವ ಆದೇಶ ಸಾಕಷ್ಟು ಕುತೂಹಲ ಕೆರಳಿಸಿದ್ದು, ಒಂದೊಮ್ಮೆ ಸ್ನೇಹಮಯಿ ಕೃಷ್ಣ ಅರ್ಜಿ ಊರ್ಜಿತವಾಗಿ ಪ್ರಕರಣ ಸಿಬಿಐಗೆ ವರ್ಗಾವಣೆ ಆದರೆ ಸಿಎಂ ಸಿದ್ದರಾಮಯ್ಯಗೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ದು ಕೋರಿದ್ದ ಅರ್ಜಿ ಆದೇಶ ನ್ಯಾ.ನಾಗಪ್ರಸನ್ನ ಅವರಿರುವ ಏಕಸದಸ್ಯ ಪೀಠದಿಂದ ತೀರ್ಪು ಪ್ರಕಟವಾಗಲಿದೆ. ಬಿಎಸ್‌ವೈ ಅರ್ಜಿ ತಿರಸ್ಕೃತವಾದರೆ ಅವರಿಗೂ ಸಹ ಸಂಕಷ್ಟ ಎದುರಾಗಲಿದೆ.