ಚಿಕ್ಕಮಗಳೂರು: ರಾಜಕೀಯ ಚುದುರಂಗದಾಟಕ್ಕೆ ಮೂಡಿಗೆರೆ (Mudigere) ತಾಲೂಕಿನ ಬಿಜೆಪಿ (BJP) ಬಲಿಯಾಗಿದ್ದು, ಪೂರ್ಣ ಬಹುಮತವಿದ್ದರು ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹುದ್ದೆ ಕಾಂಗ್ರೆಸ್ (Congress) ಪಾಲಾಗಿದೆ. ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ಹಾಗೂ ಪರಿಷತ್ ಉಪಸಭಾಪತಿ ಪ್ರಾಣೇಶ್ ಮತದಾನ ಮಾಡಿದ್ದರೂ ಸೋತ ಬಿಜೆಪಿ, ಕಾಂಗ್ರೆಸ್‌ಗೆ ಅಧಿಕಾರ ನೀಡಿದೆ.
ಮೂಡಿಗೆರೆ ಪಟ್ಟಣ ಪಂಚಾಯಿತಿಯ 11 ಸದಸ್ಯರಲ್ಲಿ 6 ಬಿಜೆಪಿ, 4 ಕಾಂಗ್ರೆಸ್ ಹಾಗೂ 1 ಜೆಡಿಎಸ್ (JDS) ಸದಸ್ಯರಿದ್ದಾರೆ. ಜೆಡಿಎಸ್ ಸದಸ್ಯ ಈ ಹಿಂದೆಯೇ ಕಾಂಗ್ರೆಸ್ ಜೊತೆ ಸೇರಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಅಲ್ಲಿಗೆ ಕಾಂಗ್ರೆಸ್ 5, ಬಿಜೆಪಿ 6 ಸದಸ್ಯರಾಗಿದ್ದರು. ಮತ್ತೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 8 ಮತಗಳಿದ್ದರೂ ಬಿಜೆಪಿ ಸೋತು ಕೈ ಪಾಳಾಯಕ್ಕೆ ಅಧಿಕಾರವನ್ನ ಬಿಟ್ಟುಕೊಟ್ಟಿದೆ. ಬಿಜೆಪಿಯ 6 ವಾರ್ಡ್ ಸದಸ್ಯರಲ್ಲಿ ಇಬ್ಬರು ಕಾಂಗ್ರೆಸ್ ಜೊತೆ ಕೈಜೋಡಿಸಿದ ಕಾರಣ ಬಿಜೆಪಿಗೆ ಅಧಿಕಾರ ಕೈತಪ್ಪಿದೆ.
ಬಿಜೆಪಿ ಸದಸ್ಯ ಧರ್ಮಪಾಲ್ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಬಿಜೆಪಿಗರೇ ಆರೋಪಿಸಿದ್ದಾರೆ. ಅವರು ಈ ಹಿಂದೆ ಕೂಡ ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು ಎಂಬ ಆರೋಪ ಅವರ ಮೇಲಿದೆ. ಈ ಬಾರಿಯೂ ಅವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ಬಾರಿ ಮತ್ತೋರ್ವ ಸದಸ್ಯ ಪಟದೂರು ಪುಟ್ಟಣ್ಣ ಕಾಂಗ್ರೆಸ್ ಜೊತೆ ಕೈಜೋಡಿಸಿ ಮತದಾನ ಮಾಡಬಾರದು ಎಂಬ ಕಾರಣಕ್ಕೆ ಕುಂಭಮೇಳಕ್ಕೆ ಹೋಗಿ ವಾಪಸ್ ಬರಲೇ ಇಲ್ಲ ಎಂದು ಬಿಜೆಪಿಗರು ಪುಟ್ಟಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪುಟ್ಟಣ್ಣ ಬೇಕೆಂದೇ ಮತದಾನಕ್ಕೆ ಬಂದಿಲ್ಲ. ಶುಕ್ರವಾರ ಸಂಜೆಯೇ ಕಾನ್ಪುರಕ್ಕೆ ಬಂದರೂ ಕೂಡ ಊರಿಗೆ ವಾಪಸ್ಸಾಗದೆ ಶನಿವಾರ ಬೆಳಗ್ಗೆ ಅಲ್ಲಿಂದ ಹೊರಟಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಹಾಗಾಗಿ, 13 ಮತಗಳಲ್ಲಿ 7 ಮತಗಳನ್ನು ಕಾಂಗ್ರೆಸ್ ಪಡೆದಿದೆ. ಈ ಮೂಲಕ ವೆಂಕಟೇಶ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮೂಡಿಗೆರೆಯಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಈ ಒಳರಾಜಕೀಯದ ಚದುರಂಗದಾಟದಿಂದಲೇ ಕೇವಲ 700 ಮತಗಳ ಅಂತರದಲ್ಲಿ ಕ್ಷೇತ್ರವನ್ನು ಕಳೆದುಕೊಂಡು ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟುಕೊಟ್ಟಿತ್ತು.