ʻʻಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆಗೆ ತಟ್ಟಿದವು ಒಂದೇ ಒಂದು ಶಬ್ಧವೂ ಇಲ್ಲ. ಮತ್ತೆ ಕಾಲುಗಳು ಅಲ್ಲಾಡಿದವು ಶವ ಸಜೀವವಾಗುತ್ತಿದೆಯೇ? ಅಂತ ನನಗೆ ಗಾಬರಿಯಾಯ್ತು. ಕೋವಿ, ಟಾರ್ಚನ್ನು ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು. ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲು ಮತ್ತು ವಾರಸುದಾರರು ಸಜೀವಗೊಂಡಿಲ್ಲ. ನರಭಕ್ಷಕ ಅನ್ನು ಸಜೀವಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟಕ್ಕೆ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯೆಲ್ಲಾ ತೊಯ್ದುಹೋಗಿತ್ತುʼʼ.
ಅಬ್ಬಬ್ಬಾ ಪೂರ್ಣಚಂದ್ರ ತೇಜಸ್ವಿ ಅವರ ʻಬೆಳ್ಳಂದೂರಿನ ನರಭಕ್ಷಕʼ ಅನುವಾದ ಕೃತಿಯಲ್ಲಿ ಬರುವ ಈ ದೃಶ್ಯವನ್ನು ಓದಿದರೆ ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ನೂರಾರು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಮೈ ರೋಮಾಂಚನಗೊಳ್ಳುತ್ತದೆ. ಇದೇ ರೀತಿಯ ನರಭಕ್ಷನ ಹಾವಳಿ ಉತ್ತರ ಪ್ರದೇಶದ ಬಹ್ರೈಚ್ ಪ್ರದೇಶದಲ್ಲಿ ಹೆಚ್ಚಾಗಿದೆ.
Advertisement
Advertisement
ಇದು ʻತೋಳ ಬಂತು ತೋಳʼದ ಕಥೆಯಲ್ಲ. ನಿಜವಾಗಿಯೂ ತೋಳಗಳ ದಾಳಿಯ ಕಥೆ. ಈ ತೋಳಗಳ ಟಾರ್ಗೆಟ್ ಕುರಿ ಮಂದೆಯಲ್ಲ. ಮನೆಯೊಳಗೆ ಬೆಚ್ಚನೆ ಮಲಗಿರುವ ಕಂದಮ್ಮಗಳು. ಗುಂಪಲ್ಲಿ ತಿರುಗಾಡುವ ತೋಳಗಳು ಮನುಷ್ಯನ ರಕ್ತದ ರುಚಿ ಹಿಡಿದಿದ್ದವು. ಕುಗ್ರಾಮಗಳಲ್ಲಿನ ಬಾಗಿಲೇ ಇಲ್ಲದ ಬಡಬಗ್ಗರ ಮನೆಗಳಿಗೆ ನುಗ್ಗಿ, ಮಕ್ಕಳನ್ನು ಅವರ ಕಣ್ಣೆದುರೇ ಎಳೆದೊಯ್ಯುತ್ತಿದ್ದವು. ಬಹ್ರೈಚ್‌ನ ವಿವಿಧ ಗ್ರಾಮಗಳಲ್ಲಿ ನರಭಕ್ಷಕ ತೋಳಗಳ ದಾಳಿಯಿಂದಾಗಿ ಇದುವರೆಗೆ 9 ಜನರು ಸಾವನ್ನಪ್ಪಿದ್ದಾರೆ ಮತ್ತು 40ಕ್ಕೂ ಹಳ್ಳಿಗಳ ಜನ ಆತಂಕದಲ್ಲಿದ್ದಾರೆ. ಇಂತಹ 6 ನರಭಕ್ಷಕ ತೋಳಗಳ ಗುಂಪಿನಲ್ಲಿ ನಾಲ್ಕು ತೋಳಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದ 2 ತೋಳಗಳಿಗಾಗಿ ಅರಣ್ಯ ಇಲಾಖೆ ತೀವ್ರ ಹುಡುಕಾಟ ನಡೆಸಿದೆ. ಅಷ್ಟಕ್ಕೂ ಬಹ್ರೈಚ್‌ನ ಈ ಪ್ರದೇಶದಲ್ಲಿ ತೋಳಗಳ ದಾಳಿ ಹೆಚ್ಚಾಗಲು ಕಾರಣವೇನು ಎಂಬುದನ್ನು ಹುಡುಕಿದಾಗ ಅನೇಕ ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ. ಅದೇನೆಂಬುದನ್ನಿಲ್ಲಿ ನೋಡೋಣ…
Advertisement
Advertisement
ಅರಣ್ಯ ಇಲಾಖೆಯ ಮೊದಲ ಹೆಜ್ಜೆ ಭಯಾನಕ!
1990ರ ದಶಕದಲ್ಲಿ ನರಭಕ್ಷಕ ತೋಳಗಳನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆಯು ರಾಜ್ಯದ ಅರಣ್ಯ ಇಲಾಖೆಯ ಇತಿಹಾಸದಲ್ಲಿ ಅತ್ಯಂತ ಘೋರವಾಗಿತ್ತು. ಸುಮಾರು 8 ತಿಂಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಭಾಗಿಯಾಗಿದ್ದರು. ಜೌನ್‌ಪುರದ ಕಾಡಿನಲ್ಲಿ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಈ ಕಾರ್ಯಚರಣೆಯಲ್ಲಿ ಸರಿಸುಮಾರು 42 ಮಕ್ಕಳು ಸಾವನ್ನಪ್ಪಿದರು. ಇದರಿಂದಾಗಿ ಅರಣ್ಯ ಇಲಾಖೆಯು ಸುಮಾರು 13 ನರಭಕ್ಷಕ ತೋಳಗಳನ್ನು ಗುಂಡಿಕ್ಕಿ ಕೊಲ್ಲಬೇಕಾಯಿತು. ಕೆಲವು ತೋಳಗಳನ್ನು ಸೆರೆ ಹಿಡಿದು ದೂರದ ಕಾಡುಗಳಿಗೆ ಬಿಡಬೇಕಾಯಿತು. ಇದು 90ರ ದಶಕದಲ್ಲಿ ತೋಳಗಳ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಇಟ್ಟ ಮೊದಲ ಹೆಜ್ಜೆಯಾಗಿತ್ತು ಎಂದು ಉತ್ತರ ಪ್ರದೇಶದ ಪ್ರಯಾಗ್ರಾಜ್‌ನ ಮಾಜಿ ವನ್ಯಜೀವಿ ವಾರ್ಡನ್ ವಿಕೆ ಸಿಂಗ್ ಹೇಳಿದ್ದಾರೆ.
ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ?
ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುವ ವೇಳೆ ಸಾಯಿ ನದಿ ತಟದ ಜಾನ್ ಪುರ, ಪ್ರತಾಪ್‌ಗಢ ಮತ್ತು ಸುಲ್ತಾನ್ ಪುರದ ಗಡಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳು ಅಂದು ತೋಳಗಳ ಆವಾಸಸ್ಥಾನವಾಗಿತ್ತು. ನರಿಗಳೂ ಸಹ ಇಲ್ಲಿ ವಾಸಿಸುತ್ತಿದ್ದವು. ಸಾಮಾನ್ಯವಾಗಿ ಸುಲಭವಾಗಿ ಆಹಾರ ಹುಡುಕಾಟದಲ್ಲಿದ್ದಾಗ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಅದೇ ರೀತಿ ಇಲ್ಲಿಯೂ ಆಗಿದೆ. ಇಲ್ಲಿನ ಹೆಣ್ಣು ತೋಳವೊಂದು ಮರಿಗಳಿಗೆ ಜನ್ಮ ನೀಡಿತ್ತು. ಈ ಸಮಯದಲ್ಲಿ ಹೆಣ್ಣು ತೋಳಗಳು ಬೇಟೆಯಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಗಂಡು ತೋಳದ ಆಶ್ರಯ ಬಯಸಿತ್ತು. ಒಮ್ಮೆ ಆಹಾರ ಹುಡುಕಿಕೊಂಡು ಹೊರಟಿದ್ದ ಗಂಡು ತೋಳ ಮಗುವೊಂದನ್ನು ಬೇಟೆಯಾಡಿ, ಭಾಗಶಃ ತಾನು ತಿಂದು ಉಳಿದ ಮಾಂಸವನ್ನು ಮರಿಗಳಿಗಾಗಿ ಹೊತ್ತೊಯ್ದಿತ್ತು. ಆದ್ರೆ ಮರಿಗಳು ಮನುಷ್ಯನ ಆಹಾರ ತಿನ್ನುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದವು, ಕ್ರಮೇಣ ಅದೇ ಆಹಾರಕ್ಕೆ ಒಗ್ಗಿಕೊಂಡವು. ಆ ನಂತರದಲ್ಲಿ ತೋಳಗಳು ಮಕ್ಕಳನ್ನು ಬೇಟೆಯಾಟಲು ಮುಂದುವರಿಸಿದವು.
ಮನೆಗೆ ನುಗ್ಗಿ ಎಳೆದೊಯ್ದ ತೋಳ:
ಈಚೆಗಷ್ಟೇ ಒಂದು ದಿನ ರಾತ್ರಿ ಬಹ್ರೈಚ್‌ನ ಮನೆಯೊಂದಕ್ಕೆ ರಾಜಾರೋಷವಾಗಿ ನುಗ್ಗಿದ ತೋಳ 7 ವರ್ಷದ ಬಾಲಕನ ಕುತ್ತಿಗೆಯನ್ನು ಕಚ್ಚಿ ಎಳೆದುಕೊಂಡು ಹೋಗಿತ್ತು ಎಂದು ಬಾಲಕನ ತಾಯಿ ತಿಳಿಸಿದ್ದಾರೆ. ತೋಳದ ಕಾಲು ಹಿಡಿದು ಎಳೆಯುವ ಮೂಲಕ ಮಗನನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು, ಆದರೆ ಸಾಧ್ಯವಾಗಲಿಲ್ಲ. ಹೊಲದಲ್ಲಿ ಸುಮಾರು 200 ಮೀಟರ್‌ಗಳವರೆಗೂ ಬಾಲಕನನ್ನು ತೋಳ ಎಳೆದುಕೊಂಡು ಹೋಗಿತ್ತು. ಆಗ ಮಹಿಳೆ ಚೀರಾಡುತ್ತಿದ್ದಂತೆ ಗ್ರಾಮಸ್ಥರೆಲ್ಲ ಸೇರಿಕೊಂಡರು. ಇದರಿಂದ ಗಾಬರಿಗೊಂಡ ತೋಳವು ಬಾಲಕನನ್ನು ಹೊಲದಲ್ಲೇ ಬಿಟ್ಟು ಪರಾರಿಯಾಗಿತ್ತು. ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ಸೇರಿಸಿ ಹೇಗೋ ಆ ತಾಯಿ ಬದುಕಿಸಿಕೊಂಡಳು.
ತೋಳಗಳು ನರಭಕ್ಷಕವೇ?
ಭಾರತೀಯ ತೋಳಗಳು ಪ್ರಾಚೀನ ವಂಶಾವಳಿಯನ್ನು ಹೊಂದಿವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ತೋಳಗಳಲ್ಲಿ ಬೂದು ತೋಳ ಹಾಗೂ ನಾಯಿ ತೋಳ ಎಂಬ ಸಂತತಿಗಳಿವೆ. ಅವುಗಳನ್ನು ದೇಹದ ಆಕಾರ, ಬಣ್ಣಗಳಿಂದ ಪ್ರತ್ಯೇಕಿಸಬಹುದು. ಈ ಎರಡು ಉಪಜಾತಿಗಳ ಪೈಕಿ ನಾಯಿ ತೋಳಗಳು ನರಭಕ್ಷಕ ತೋಳಗಳಾಗಿವೆ. ಇವು ಅತ್ಯಂತ ಚುರುಕು ಬುದ್ಧಿ ಹೊಂದಿರುತ್ತವೆ. ಇವುಗಳನ್ನು ಸೆರೆ ಹಿಡಿಯುವಾಗ ಮೀನಿಗೆ ಗಾಳ ಹಾಕಿದಂತೆ, ಮಾಂಸವನ್ನು ಬಳಸಿ ಎಚ್ಚರಿಕೆಯಿಂದ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ವರದಿಗಳ ಪ್ರಕಾರ ಭಾರತದಲ್ಲಿ ಸುಮಾರು, 2,000 ತೋಳಗಳಿದ್ದು, ವನುಜೀವಿ ಸಂರಕ್ಷಣಾ ಕಾಯ್ದೆ 1972 ಶೆಡ್ಯೂಲ್-1 ನಿಯಮದ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿವೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಅವುಗಳ ಆವಾಸಸ್ಥಾನವಾಗಿರುವ ಹುಲ್ಲುಗಾವಲು ಪ್ರದೇಶಗಳನ್ನು ʻವೇಸ್ಟ್‌ಲ್ಯಾಂಡ್ʼ ಎಂದು ತಳ್ಳಿಹಾಕುತ್ತಿರುವುದರಿಂದ ಅವುಗಳ ಸಂತತಿಗಳ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ತೋಳಗಳು ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಮಾನವನೊಂದಿಗೆ ಸಂಘರ್ಷಕ್ಕಿಳಿದಿವೆ. ಭವಿಷ್ಯದಲ್ಲಿ ಸಂಕಷದ ಹಾದಿ ಇನ್ನಷ್ಟು ಕಠಿಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಮೂಲ ಸೌಕರ್ಯಗಳ ಕೊರತೆಯೂ ದಾಳಿಗೆ ಕಾರಣವೇ?
ಹೌದು. ವರದಿಗಳ ಪ್ರಕಾರ, ತೋಳಗಳ ದಾಳಿಗೆ ಒಳಪಟ್ಟ ಬಹ್ರೈಚ್ ಪ್ರದೇಶದಲ್ಲಿ ಜನರಿಗೆ ಮೂಲ ಸೌಕರ್ಯಗಳ ಕೊರತೆ ಆಗಿರುವುದೇ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಇಲ್ಲಿ ಎಷ್ಟೋ ಮನೆಗಳಿಗೆ ಬಾಗಿಲುಗಳಿಲ್ಲ, ಕೆಲವರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲ, ಶೌಚಾಲಯಗಳು ಇಲ್ಲ. ಹೀಗಾಗಿ ತೋಳಗಳ ದಾಳಿ ಹೆಚ್ಚಾಗಿದೆ. ವಿದ್ಯುತ್ ಇಲ್ಲದೇ ರಾತ್ರಿ ವೇಳೆ ಸಂಚಾರ ಮಾಡುವ ವೇಳೆ, ಬಹಿರ್ದೆಸೆಗೆ ತೆರಳಿದ ಸಂದರ್ಭದಲ್ಲಿ ದಾಳಿಗಳು ನಡೆಯುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇದಲ್ಲದೇ ವನ್ಯಜೀವಿ ತಜ್ಞರೂ ಒಂದು ಉಪಾಯವನ್ನು ಸೂಚಿಸಿದ್ದಾರೆ. ಮಲಗುವ ಸಂದರ್ಭದಲ್ಲಿ ನಿಮ್ಮ ಮಕ್ಕಳ ತೋಳಿಗೆ ಹಗ್ಗ ಕಟ್ಟಿಕೊಂಡು ಮಲಗಬೇಕು. ಒಂದು ವೇಳೆ ತೋಳಗಳು ತಮ್ಮ ನಿರ್ದಿಷ್ಟ ಬೇಟೆಯನ್ನು ಹಿಡಿಯಲು ಸಾಧ್ಯವಾಗದೇ ಇದ್ದಾಗ, ತನ್ನ ದಾಳಿಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ತಜ್ಞರು ಉಪಾಯ ಸೂಚಿಸಿದ್ದಾರೆ.
ದಾಳಿ ಹಿಂದಿದೆ ʻಸೇಡಿನ ಕಥೆʼ:
ಬಹ್ರೈಚ್ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ತೋಳಗಳ ದಾಳಿಯ ಬಗ್ಗೆ ರೋಚಕ ಸಂಗತಿಯೊಂದನ್ನ ಬಿಚ್ಚಿಟ್ಟಿದ್ದಾರೆ. ತೋಳಗಳು ಇತರ ಕಾಡು ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ, ತೋಳಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಹಿಂದೆ ಮನುಷ್ಯರು ತೋಳಗಳಿಗೆ ಯಾವುದೋ ಒಂದು ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಈ ದಾಳಿಗಳು ನಡೆಯುತ್ತಿವೆ ಎಂದಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ಚೌನ್‌ಪುರ ಮತ್ತು ಪ್ರತಾಪ್ ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ತೋಳಗಳು ಕೊಂದಿದ್ದವು. ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ಮಕ್ಕಳು ಎರಡು ತೋಳದ ಮರಿಗಳನ್ನು ಗುಹೆಯಲ್ಲಿ ಕೊಂದಿರುವುದು ಕಂಡುಬಂದಿತು. ಬಳಿಕ ತೋಳದ ಮರಿಗಳ ಪೋಷಕರು ತುಂಬಾ ಆಕ್ರಮಣಕಾರಿಯಾದವು ಮತ್ತು ಆ ಪ್ರದೇಶದಲ್ಲಿ ವಾಸಿಸುವ ಮನುಷ್ಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಕೆಲವು ತೋಳಗಳನ್ನು ಹಿಡಿಯಲಾಯಿತು ಆದರೆ, ಎರಡು ನರಭಕ್ಷಕ ತೋಳಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಆ ತೋಳಗಳನ್ನು ಗುರುತಿಸಿ, ಗುಂಡಿಕ್ಕಿ ಕೊಲ್ಲಲಾಯಿತು ಎಂದು ಜ್ಞಾನ್ ಪ್ರಕಾಶ್ ಸಿಂಗ್ ಹೇಳಿದ್ದರು.
ಬಹ್ರೈಚ್‌ನಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ತೋಳ ಮರಿಗಳು ಟ್ರ್ಯಾಕ್ಟರ್‌ನ ಚಕ್ರದಡಿಯಲ್ಲಿ ಸಿಲುಕಿ ಮೃತಪಟ್ಟಿದ್ದವು. ಇದರಿಂದ ಕೋಪಗೊಂಡ ತೋಳಗಳು ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ಕೆಲವು ತೋಳಗಳನ್ನು ಹಿಡಿದು 40ಕಿ.ಮೀ ದೂರದಲ್ಲಿರುವ ಚಾಕಿಯಾ ಅರಣ್ಯದಲ್ಲಿ ಬಿಡಲಾಯಿತು. ಆದರೆ, ಬಹುಶಃ ಇಲ್ಲಿ ತಪ್ಪಾಗಿದೆ. ಚಾಕಿಯಾ ಅರಣ್ಯವು ತೋಳಗಳ ನೈಸರ್ಗಿಕ ಆವಾಸಸ್ಥಾನವಲ್ಲ. ಹೀಗಾಗಿ ತೋಳಗಳು ಹಿಂತಿರುಗಿ ಸೇಡು ತೀರಿಸಿಕೊಳ್ಳಲು ಈ ದಾಳಿಗಳನ್ನು ನಡೆಸುತ್ತಿರುವ ಸಾಧ್ಯತೆಯಿದೆ. ಅರಣ್ಯ ಇಲಾಖೆಯು ಇಲ್ಲಿಯವರೆಗೆ ಸೆರೆಹಿಡಿಯಲಾದ ನಾಲ್ಕು ತೋಳಗಳ ಬಗ್ಗೆ ಮಾತನಾಡಿದ ಸಿಂಗ್, ಇದುವರೆಗೆ ಸಿಕ್ಕಿಬಿದ್ದಿರುವ ನಾಲ್ಕು ತೋಳಗಳು ನರಭಕ್ಷಕರು ಎಂಬ ಭರವಸೆ ಇಲ್ಲ. ನರಭಕ್ಷಕರು ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ಬಹುಶಃ ಇದರಿಂದಾಗಿಯೇ ಮೂರ್ನಾಲ್ಕು ದಾಳಿಗಳು ನಡೆದಿವೆ ಎಂದಿದ್ದಾರೆ.
ಸಿಂಹಗಳು ಮತ್ತು ಚಿರತೆಗಳು ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ, ಆದರೆ ತೋಳಗಳು ಹೊಂದಿವೆ. ತೋಳಗಳ ಆವಾಸಸ್ಥಾನಕ್ಕೆ ಯಾವುದೇ ತೊಂದರೆ ಉಂಟಾದರೆ ಅಥವಾ ಅವುಗಳ ಮರಿಗಳನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಿದರೆ, ಅವು ಮನುಷ್ಯರನ್ನು ಬೇಟೆಯಾಡುವ ಮೂಲಕ ಸೇಡು ತೀರಿಸಿಕೊಳ್ಳುತ್ತವೆ. ನರಭಕ್ಷಕ ತೋಳಗಳನ್ನು ಹಿಡಿಯಲು ಸಾಧ್ಯವಾಗದಿದ್ದರೆ ಮತ್ತು ಅವುಗಳ ತಮ್ಮ ದಾಳಿಯನ್ನು ಮುಂದುವರಿಸಿದರೆ, ಕೊನೆಯ ಅಸ್ತ್ರವಾಗಿ, ಅವುಗಳನ್ನು ಶೂಟ್ ಮಾಡಲು ಆದೇಶ ನೀಡಲಾಗುವುದು ಎಂದು ದೇವಿಪಟ್ಟಣದ ವಿಭಾಗೀಯ ಆಯುಕ್ತ ಶಶಿಭೂಷಣ್ ಲಾಲ್ ಸುಶೀಲ್ ಹೇಳಿದ್ದಾರೆ.