– ಶತಕೋಟಿ ಡಾಲರ್ ಖರ್ಚು ಮಾಡಿ ತೈಲ ನಿಕ್ಷೇಪದ ಮೂಲಸೌಕರ್ಯ ಅಭಿವೃದ್ಧಿ: ಟ್ರಂಪ್ ಘೋಷಣೆ
ಕ್ಯಾರಕಾಸ್/ವಾಷಿಂಗ್ಟನ್: ತನ್ನದಲ್ಲದ ದೇಶಕ್ಕೆ ಕಾಲಿಟ್ಟು ಯುದ್ಧ ಮಾಡೋದು, ರಹಸ್ಯ ಕಾರ್ಯಾಚರಣೆಗಳನ್ನ ನಡೆಸೋದು, ಬಾಂಬ್ ಹಾಕೋದು, ಅಷ್ಟೇ ಯಾಕೆ ಆ ದೇಶದ ಅಧ್ಯಕ್ಷರನ್ನೇ ಸೆರೆಹಿಡಿದು ಹೊತ್ತೊಯ್ಯೋದು. ಇಡೀ ಜಗತ್ತೇ ತನ್ನ ಪ್ರಭಾವದಲ್ಲಿದೆ ಅನ್ನೋ ಹಾಗೇ ನಡೆಯೋದು ಅಮೆರಿಕಕ್ಕೆ ಕಾಮನ್ ಆಗಿಬಿಟ್ಟಿದೆ.
ವೆನೆಜುವೆಲಾದಲ್ಲಿ ಟ್ರಂಪ್ ಆಡಳಿತ ಘೋಷಣೆ ಮಾಡಿರೋದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ. ಭಾರತ ಕೂಡ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದೆ. ಈ ಎಲ್ಲ ಬೆಳವಣಿಗೆ ನಡುವೆ ಹೆಚ್ಚು ಸದ್ದು ಮಾಡುತ್ತಿರೋದು ತೈಲ ನಿಕ್ಷೇಪ.
ಹೌದು. ವಿಶ್ವದಲ್ಲೇ ಅತಿದೊಡ್ಡ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಬಳಕೆ ಮಾಡಿರೋದು ಕೇವಲ 1% ಮಾತ್ರ. ಇದೀಗ ತನ್ನ ದೇಶವನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಅಮೆರಿಕ, ತೈಲ ತೆಗೆದು ಮಾರಾಟ ಮಾಡಲು ತಯಾರಿ ಶುರು ಮಾಡಿದೆ. ಟ್ರಂಪ್ ಕೂಡ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಆದಾಗ್ಯೂ ಅಮೆರಿಕದ ಕ್ರಮದಿಂದ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.
ಅತಿದೊಡ್ಡ ತೈಲ ನಿಕ್ಷೇಪ ಹೊಂದಿದ್ದರೂ ಸಂಕಷ್ಟಕ್ಕೆ ಸಿಲುಕಿದ್ದೇಕೆ?
ಹೌದು. ವೆನೆಜುವೆಲಾ ವಿಶ್ವದ ತೈಲ ನಿಕ್ಷೇಪಗಳಲ್ಲಿ ಶೇ.18 ರಷ್ಟು ಹೊಂದಿದೆ, ಇದು ಅತಿದೊಡ್ಡದು. ಆದ್ರೆ ಇಲ್ಲಿಯವರೆಗೆ ಹೊರತೆಗೆದಿರುವುದು ಶೇ.1 ರಷ್ಟು ಮಾತ್ರ. ಏಕೆಂದ್ರೆ ಗಲ್ಫ್ ರಾಷ್ಟ್ರಗಳಲ್ಲಿ ಕಂಡುಬರುವ ಹಗುರ ತೈಲಕ್ಕೆ ಹೋಲಿಸಿದ್ರೆ, ವೆನೆಜುವೆಲಾ ಹೆಚ್ಚಿನ ಭಾರ ತೈಲ ನಿಕ್ಷೇಪ ಹೊಂದಿದೆ. ಭಾರ ತೈಲಕ್ಕೆ ಹೆಚ್ಚಿನ ಮಟ್ಟದ ಸಂಸ್ಕರಣಾ ಸೌಲಭ್ಯಗಳ ಅಗತ್ಯವಿದೆ. ವೆನೆಜುವೆಲಾ ಬಳಿ ಈ ಸಂಸ್ಕರಣಾ ಸೌಲಭ್ಯ ಇರಲಿಲ್ಲ. ಇದರೊಂದಿಗೆ ಅಮೆರಿಕ ವೆನೆಜುವೆಲಾ ಮೇಲೆ ನಿರ್ಬಂಧ ವಿಧಿಸಿ, ತೈಲ ರಫ್ತು ಮಾಡೋದನ್ನೂ ನಿಲ್ಲಿಸಿತ್ತು. ಇದು ವೆನೆಜುವೆಲಾಗೆ ದೊಡ್ಡ ಪೆಟ್ಟು ಬಿದ್ದಂತಾಗಿ, ಹೆಚ್ಚಿನ ತೈಲ ಬಳಕೆ ಮಾಡಲು ಸಾಧ್ಯವಾಗಲಿಲ್ಲ.
ಟ್ರಂಪ್ ಹೇಳಿದ್ದೇನು?
ಅಮೆರಿಕದ ತೈಲ ಕಂಪನಿಗಳು ವೆನೆಜುವೆಲಾಗೆ ಹೋಗಲಿವೆ. ಅದಕ್ಕಾಗಿ ಶತಕೋಟಿ ಡಾಲರ್ ಖರ್ಚು ಮಾಡಿ ತೈಲ ನಿಕ್ಷೇಪಗಳನ್ನ ಅಭಿವೃದ್ಧಿಪಡಿಸಲಿದೆ. ತೈಲ ಹೊರತೆಗೆಯಲು ಅಗತ್ಯವಿರುವ ಮೂಲ ಸೌಕರ್ಯಗಳನ್ನ ಸರಿಪಡಿಸಲಿದ್ದು, ದೇಶಕ್ಕಾಗಿ ಹಣ ಸಂಪಾದಿಸಲಿದೆ. ನಮ್ಮಿಂದ ತೈಲ ಬಯಸುವ ದೇಶಗಳೊಂದಿಗೆ ನಾವು ವ್ಯವಹಾರದಲ್ಲಿರುತ್ತೇವೆ. ಇತರ ದೇಶಗಳಿಗೆ ಹೆಚ್ಚಿನ ಪ್ರಮಾಣದ ತೈಲ ಮಾರಾಟ ಮಾಡಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದ್ರೆ ವೆನೆಜುವೆಲಾ ಮೇಲೆ ವಿಧಿಸಿರುವ ಈವರೆಗಿನ ನಿರ್ಬಂಧಗಳನ್ನ ಅಮೆರಿಕ ತೆಗೆದುಹಾಕಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಭಾರತದ ಮೇಲೇನು ಪರಿಣಾಮ?
ವೆನಿಜುವೆಲಾ ಜೊತೆ ರಫ್ತಾಗಲೀ, ಆಮದಾಗಲೀ ಭಾರತ ವ್ಯಾಪಾರ ಪ್ರಮಾಣ ಕಡಿಮೆಯೇ ಇದೆ. ಹೀಗಾಗಿ, ವೆನಿಜುವೆಲಾದಲ್ಲಿ ಮುಂದಿನ ಪರಿಸ್ಥಿತಿ ಏನೇ ಆದರೂ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ.
ಸತತ ಪ್ರಯತ್ನಗಳು ವಿಫಲವಾಗಿ ದಾಳಿ ಮಾಡಿದ ಅಮೆರಿಕ
2013ರಿಂದ ಸತತವಾಗಿ ವೆನೆಜುವೆಲಾದ ಅಧ್ಯಕ್ಷ ಸ್ಥಾನದಲ್ಲಿರುವ ಮಡುರೊ ಅವರ ಅಧಿಕಾರವನ್ನ ಟ್ರಂಪ್ ಆಡಳಿತ ಪ್ರಶ್ನಿಸುತ್ತಿದೆ. ಇತ್ತೀಚೆಗೆ, ಅಂದ್ರೆ 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆಯು ನ್ಯಾಯಯುತವಾಗಿಲ್ಲ ಎಂಬುದು ಅಮೆರಿಕದ ವಾದ. ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅವರು ಅಧಿಕಾರಕ್ಕೆ ಪದೇ ಪದೇ ಬರುತ್ತಿದ್ದಾರೆ ಎಂಬುದು ಅಮೆರಿಕದ ವಾದ. ಅದೇ ಕಾರಣಕ್ಕಾಗಿ, ವೆನೆಜುವೆಲಾದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಾ, ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರುವ ಮೂಲಕ ಮಡುರೊ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಮೆರಿಕ ಸತತವಾಗಿ ಪ್ರಯತ್ನಿಸುತ್ತಲೇ ಇತ್ತು. ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದಕ್ಕೆ ಈಗ ನೇರವಾಗಿ ದಾಳಿ ನಡೆಸಿತು.




