ದಾವಣಗೆರೆ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಎಲ್ಲ ವಾಹನ ಸವಾರರು ಕಡ್ಡಾಯವಾಗಿ ಭಾರತೀಯ ಮೋಟರು ವಾಹನ ಕಾಯ್ದೆಯ ನಿಯಮಾನುಸಾರ ನೋಂದಣಿ ಫಲಕಗಳನ್ನು (ನಂಬರ್ ಪ್ಲೇಟ್) ಅಳವಡಿಸಿಕೊಳ್ಳಬೇಕು. ನಿರ್ಧಿಷ್ಟ ಅಳತೆ ಹಾಗೂ ನಂಬರ್ ಪ್ಲೇಟ್‍ನ ಮೂರನೇ ಒಂದು ಭಾಗದಲ್ಲಿ ಸರ್ಕಾರದ ಹಾಲೋಗ್ರಾಮ್ ಮತ್ತು ಐ.ಎನ್.ಡಿ ಎಂದು ನಮೂದಾಗಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಹನ ನೋಂದಣಿ ಫಲಕಗಳ ಕಾನೂನು ತಯಾರಿಸುವ ಕುರಿತು ಏರ್ಪಡಿಸಿಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ನೋಂದಣಿ ಫಲಕಗಳನ್ನು ಸ್ವ ಇಚ್ಛೆಯಂತೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನಗಳ ನೋಂದಣಿ ಪತ್ತೆ ಹಚ್ಚುವುದು ಮತ್ತು ಅಪರಾಧ ಮಾಡಿದ ಸಂದರ್ಭದಲ್ಲಿ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಅಲ್ಲದೆ ಇದು ಭಾರತೀಯ ಮೋಟರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬ ವಾಹನ ಸವಾರರು ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
Advertisement
Advertisement
ವಾಹನ ನೊಂದಣಿ ಸಂಖ್ಯೆಯ ಫಲಕದ ಅಕ್ಷರಗಳು ಆಂಗ್ಲ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನಕ್ಕೆ ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ಇದರ ಅಳತೆ 1.0 ಎಂ.ಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐ.ಎಸ್.ಓ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂ.ಎಂ ದುಂಡದಾಗಿ ಮಾಡಿಸಬೇಕು. 2 ಮತ್ತು 3 ಚಕ್ರದ ವಾಹನಗಳಿಗೆ 200*100 ಎಂ.ಎಂ ಗಾತ್ರದ ನೊಂದಣಿ ಫಲಕ ಹೊಂದಿರಬೇಕು ಎಂದು ವಿವರಿಸಿದರು.
Advertisement
ಕಾರುಗಳ ನಂಬರ್ ಪ್ಲೇಟ್ ಅಳತೆ 500*200 ಎಂ.ಎಂ,. ಲಘು ಮತ್ತು ಭಾರೀ ಗಾತ್ರದ ವಾಹನಗಳಿಗೆ 340*200 ಎಂ.ಎಂ ಗಾತ್ರದ ನೋಂದಣಿ ಫಲಕ ಹೊಂದಿರಬೇಕು. 2 ಮತ್ತು 3 ಚಕ್ರದ, ಮತ್ತು 4 ಚಕ್ರದ ವಾಹನಗಳ ಮುಂಭಾಗದ ನೊಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 35 ಎಂ.ಎಂ, 7 ಎಂ.ಎಂ ದಪ್ಪ ಹಾಗೂ ಹಿಂಭಾಗದ ನೋಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 40 ಎಂ.ಎಂ, 7 ಎಂ.ಎಂ ದಪ್ಪ ಇರಬೇಕು. ಮಧ್ಯದ ಅಂತರ 5 ಎಂ.ಎಂ ಇರಬೇಕು ಎಂದು ಸೂಚಿಸಿದ್ದಾರೆ.
Advertisement
ನೋಂದಣಿ ಫಲಕಗಳಲ್ಲಿ ಅಲಂಕಾರಿಕ ಅಕ್ಷರಗಳು, ಯಾವುದೇ ಚಿತ್ರ, ಹೆಸರು, ದೇವರ ಚಿತ್ರಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಯಾವುದೇ ವಾಹನಗಳ ನೊಂದಣಿ ಫಲಕವನ್ನು ಹಾಕಿಸುವ ಸಮಯದಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ನಿಯಮವನ್ನು ಇಂದಿನಿಂದಲೇ ಜಾರಿಗೊಳಿಸಲಾಗಿದ್ದು, ನಿಯಮ ಪಾಲಿಸದಿದ್ದಲ್ಲಿ 1,000ರೂ. ದಂಡ ವಿಧಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.