ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದ ಸಂಚಾರ ನಿಯಮ ಉಲ್ಲಂಘನೆಯ ಹೊಸ ದಂಡಕ್ಕೆ ವಾಹನ ಸವಾರರು ದಂಡ ಕಟ್ಟಲಾಗದೆ ಬೈಕ್ ಹಾಗೂ ಕಾರ್‌ಗಳನ್ನು ಪೊಲೀಸರ ಬಳಿಯೇ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪೊಲೀಸ್ ಠಾಣೆಯ ಆವರಣದಲ್ಲಿ ಬಿಟ್ಟು ಹೋದ ವಾಹನಗಳನ್ನು ಮರಳಿ ಪಡೆಯಲು ವಾಹನ ಸವಾರರು ತಿಂಗಳಗಂಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಳಗಾವಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸುಮಾರು 60ಕ್ಕೂ ಹೆಚ್ಚು ಬೈಕ್‍ಗಳು ಪೊಲೀಸರ ಬಳಿಯೇ ಇವೆ. ಅವುಗಳನ್ನು ನಿಲ್ಲಿಸಲು ಜಾಗ ಇಲ್ಲದೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ದಂಡ ಕಟ್ಟಿ ವಾಹನ ತೆಗೆದುಕೊಂಡು ಹೋಗುವಂತೆ ವಾಹನ ಮಾಲೀಕರಿಗೆ ಕರೆ ಮಾಡಲು ಒಬ್ಬ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಲಾಗಿದೆ. ಅಷ್ಟರ ಮಟ್ಟಿಗೆ ದುಬಾರಿ ದಂಡ ಪೊಲೀಸರಿಗೆ ಇರುಸು-ಮುರುಸು ಉಂಟುಮಾಡಿದೆ.
Advertisement
Advertisement
ಸಂಚಾರ ನಿಯಮದ ದಂಡ 500-3000 ರೂ. ವರೆಗೆ ಇದ್ದರೆ ವಾಹನ ಸವಾರರು ಜಾಗದಲ್ಲೇ ಅಥವಾ ಮಾರನೆ ದಿನ ದಂಡಕಟ್ಟಿ ವಾಹನ ಪಡೆದು ಹೋಗುತ್ತಿದ್ದರು. ಆದರೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಅಂಥ ದಂಡವನ್ನು ನ್ಯಾಯಾಲಯದಲ್ಲಿಯೇ ಕಟ್ಟಿ ವಾಹನ ಬಿಡಿಸಿಕೊಂಡು ಬರುವುದು ಸಾಮಾನ್ಯವಾಗಿದೆ. ಇಂತಹ ಪ್ರಕರಣದಲ್ಲಿ ಕನಿಷ್ಠ 10ಸಾವಿರ ರೂ. ದಂಡ ಕಟ್ಟಿಟ್ಟ ಬುತ್ತಿ.
Advertisement
ಹೆಲ್ಮೆಟ್, ವಿಮಾ, ಪರವಾನಿಗೆ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಆಗಿದ್ದರೆ 15 ಸಾವಿರಕ್ಕೂ ಅಧಿಕ ದಂಡದ ಮೊತ್ತ ಹೆಚ್ಚುತ್ತದೆ. ಒಂದೇ ಬಾರಿ ಅಷ್ಟೊಂದು ದಂಡದ ಮೊತ್ತವನ್ನು ತುಂಬಲು ವಾಹನ ಸವಾರರು ಮುಂದೆ ಬರುತ್ತಿಲ್ಲ. ಅವರು ದಂಡ ಕಟ್ಟಿ ವಾಹನ ಪಡೆಯಲು ಒಂದು ತಿಂಗಳ ಸಮಯಬೇಕಾಗುತ್ತದೆ. ಅಲ್ಲಿಯವರೆಗೂ ವಾಹನಗಳನ್ನು ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸರು ರಕ್ಷಣೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ವಾಹನಗಳ ಮಾಲೀಕರು ವಾಹನಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಆದ್ದರಿಂದ ವಾಹನಗಳು ಪೊಲೀಸ್ ಠಾಣೆಯಲ್ಲಿ ಇರುತ್ತದೆ. ವಾಹನ ಮಾಲೀಕರಿಗೆ ಕೋರ್ಟ್ ನಿಂದ ಮನೆಗೆ ನೋಟಿಸ್ ಕೊಡಿಸುವ ಅವಕಾಶವೂ ಪೊಲೀಸ್ ಇಲಾಖೆಗೆ ಇದೆ ಎಂದು ಡಿಸಿಪಿ ಯಶೋಧಾ ಹೇಳಿದ್ದಾರೆ.