– ನಿಯಮ ಬಾಹಿರವಾಗಿ ನಂಬರ್ ಪ್ಲೇಟ್ ಅಳವಡಿಕೆ
ಯಾದಗಿರಿ: ವಾಹನ ಸವಾರರು ನಿಯಮ ಬಾಹಿರವಾಗಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ RTO ಅಧಿಕಾರಿಗಳು ವಾಹನಗಳ ಮೇಲೆ ದಾಳಿ ಮಾಡಿ, ನಂಬರ್ ಪ್ಲೇಟ್ ಕಿತ್ತು ಹಾಕಿ ದಂಡವನ್ನು ಹಾಕುತ್ತಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ RTO ವಸಂತ್ ಚೌಹ್ವಾನ್ ನೇತೃತ್ವದಲ್ಲಿ ಈ ದಾಳಿ ನಡೆಯುತ್ತಿದೆ. ಈಗಾಗಲೇ ನೂರಾರು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 30 ವಾಹನಗಳ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ, ಸುಮಾರು 15,000 ದಂಡವನ್ನು ಸಂಗ್ರಹಿಸಿದ್ದಾರೆ.
Advertisement
Advertisement
ವಾಹನಗಳ ನಂಬರ್ ಪ್ಲೇಟ್‍ನಲ್ಲಿ ಸಂಘಟನೆಗಳ, ಕಂಪನಿಯ ಹೆಸರು ಮತ್ತು ನಿರ್ವಹಿಸುತ್ತಿರುವ ಹುದ್ದೆಗಳ ಹೆಸರನ್ನು ವಾಹನ ಸವಾರರು ಹಾಕಿಸುವುದು ಸಾಮಾನ್ಯ. ಆದರೆ ಈ ರೀತಿಯಾಗಿ ನಂಬರ್ ಪ್ಲೇಟ್‍ನಲ್ಲಿ ಹಾಕಿಸುವುದು ನಿಯಮ ಬಾಹಿರವಾಗಿದೆ. ಅಲ್ಲದೆ ರಸ್ತೆ ಸಾರಿಗೆ ನಿಗಮ ಸೂಚಿಸಿದ ರೀತಿಯಲ್ಲಿ ವಾಹನಗಳ ಸಂಖ್ಯಾ ಫಲಕ ಇಲ್ಲದೆ ಹೋದರೆ ದಂಡ ಹಾಕುವುದು ಅನಿವಾರ್ಯವಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.