-ಪೊಲೀಸ್ ಇಲಾಖೆಯ ಖಡಕ್ ಎಚ್ಚರಿಕೆ
ಬಾಗಲಕೋಟೆ: ಬೈಕ್ ಮತ್ತು ಕಾರು ಸೇರಿದಂತೆ ಇತರೆ ವಾಹನಗಳ ಸಂಖ್ಯಾ ಫಲಕದ ಮೇಲೆ ಫ್ಯಾಷನ್ ಚಿತ್ರ ಮತ್ತು ಯಾವುದೇ ರೀತಿಯ ಸಿನಿಮಾ ಹೆಸರು ಇರುವ ನಂಬರ್ ಪ್ಲೇಟ್‍ಗಳನ್ನ ಬಾಗಲಕೋಟೆ ನಗರ ಪೊಲೀಸರು ಕಿತ್ತು ಹಾಕುತ್ತಿದ್ದಾರೆ.
ಒಂದು ವಾರಗಳಿಂದ ಆರಂಭವಾಗಿರುವ ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆ, ಸದ್ಯ ಜಿಲ್ಲೆಯ ಎಲ್ಲಾ ಭಾಗದಲ್ಲಿ ಶುರುವಾಗಿದೆ. ಪೊಲೀಸರು ಸಂಚಾರದಲ್ಲಿರುವ ವಾಹನಗಳ ನಂಬರ್ ಪ್ಲೇಟ್ ತಪಾಸಣೆ ಮಾಡುತ್ತಿದ್ದು, ಬೇಕಾಬಿಟ್ಟಿ ಫ್ಯಾನ್ಸಿ ರೀತಿಯಲ್ಲಿ ವಾಹನಗಳಿಗೆ ಹಾಕಲಾಗಿರುವ ಸಂಖ್ಯಾ ಫಲಕ ಕಿತ್ತು ಹಾಕಿ ತಿಳುವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಾಗಲಕೋಟೆ, ಬಾದಾಮಿ ಹಾಗೂ ಇಳಕಲ್ಲ ಪಟ್ಟಣದಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಾಹನ ಸವಾರರು ನಿರ್ಲಕ್ಷ್ಯ ಮಾಡಿದ್ದಲ್ಲಿ ಮುಂದೆ ದಂಡ ಕಟ್ಟಲು ಸಜ್ಜಾಗಬೇಕು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಿಂದ ಹೆದರಿದ್ದ ವಾಹನ ಸವಾರರು ಸದ್ಯ ಪೊಲೀಸರ ನೂತನ ನಿಯಮದಿಂದ ಕಂಗಾಲಾಗಿದ್ದಾರೆ. ಒಟ್ಟಾರೆ ಪೊಲೀಸರು ನಿಮ್ಮನ್ನ ತಡೆದು ದಂಡ ಹಾಕುವ ಮುಂಚೆ ಸವಾರರು ಎಚ್ಚೆತ್ತುಕೊಂಡು ತಮ್ಮ ವಾಹನದ ಫ್ಯಾನ್ಸಿ ನಂಬರ್ ಪ್ಲೇಟ್ ಕಿತ್ತು ಹಾಕಿ, ಮೋಟಾರು ಕಾಯಿದೆ ಪ್ರಕಾರ ಸೂಚಿಸಲಾಗಿರುವ ರೀತಿಯಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.