ನೆಲಮಂಗಲ: ಕೇಂದ್ರ ಸಾರಿಗೆ ಇಲಾಖೆ ಈಗಾಗಲೇ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಖ್ಯೆ ಬಿಟ್ಟು, ಚಿಹ್ನೆ, ಹೆಸರುಗಳನ್ನ ಹಾಕುವಂತಿಲ್ಲ ಎಂದು ಆದೇಶ ಮಾಡಿದೆ. ಆದರೆ ವಾಹನಗಳ ಮಾಲೀಕರು ಮಾತ್ರ ಎಚ್ಚೆತ್ತಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಆರ್‌ಟಿಓ ಅಧಿಕಾರಿಗಳು, ವಾಹನಗಳ ಮೇಲೆ ಚಿತ್ರ, ವಿಚಿತ್ರ ರೀತಿಯಲ್ಲಿ ಹೆಸರು, ಪ್ಲೇಟ್ ಡಿಸೈನ್, ಸಂಘ-ಸಂಸ್ಥೆಯ ಹೆಸರುಗಳು ಹೀಗೆ ನಿಯಮ ಮೀರಿ ಇದ್ದ ಎಲ್ಲಾ ವಾಹನಗಳ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಲಮಂಗಲ ಸಾರಿಗೆ ಅಧಿಕಾರಿ ಡಾ.ಒಡೆಯರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನೆಲಮಂಗಲ ಭಾಗದಲ್ಲಿನ ವಾಹನ ಸವಾರಿಗೆ ಅರಿವು ಮೂಡಿಸುವುದರ ಜೊತೆಗೆ ಇನ್ಮುಂದೆ ಕಡ್ಡಾಯವಾಗಿ ತೆರವು ಮಾಡಲೇಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ವಾಹನಗಳ ಚಿತ್ರ-ವಿಚಿತ್ರ ನಂಬರ್ ಪ್ಲೇಟ್‍ಗಳನ್ನ ಸ್ಥಳದಲ್ಲಿಯೇ ತೆರವುಗೊಳಿಸಿ ಹೊಸ ನಂಬರ್ ಪ್ಲೇಟ್‍ಗಳನ್ನ ಹಾಕಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಯಿತು. ಸಾರಿಗೆ ಇಲಾಖೆಯ ಖಡಕ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.