ಹಾಸನ: ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟ್ಟಿದ್ದವರ ಮೇಲೆ ಬೊಲೆರೋ ಗೂಡ್ಸ್ ವಾಹನವೊಂದು ಹರಿದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಡೇನಹಳ್ಳಿ ಗೇಟ್ ಬಳಿ ನಡೆದಿದೆ.
ಬೆಳಗ್ಗಿನ ಜಾವ 5:30ರ ಸುಮಾರಿಗೆ ಹಡೇನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಬರಾಳು ಗ್ರಾಮದ ನಿವಾಸಿ ಹೇಮರಾಜ್, ನಾಗಣ್ಣ, ರವಿ, ಅನಿಲ್ ಅವರು ವಾಕಿಂಗ್‍ಗೆ ಹೊರಟ್ಟಿದ್ದರು. ಈ ವೇಳೆ ವೇಗದಿಂದ ಬಂದ ಬೊಲೆರೋ ಗೂಡ್ಸ್ ಮೊದಲು ನಾಗಣ್ಣ, ರವಿಗೆ ಡಿಕ್ಕಿ ಹೊಡೆದ ನಂತರ ಹೇಮರಾಜ್‍ಗೂ ಗುದ್ದಿದೆ. ಘಟನೆಯಿಂದಾಗಿ ತೀವ್ರ ಗಾಯಗೊಂಡ ಬರಾಳು ಗ್ರಾಮದ ಹೇಮರಾಜ್(50) ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಅಪಘಾತ ಮಾಡಿದ್ದರೂ ಕ್ಯಾರೇ ಎನ್ನದೆ ವಾಹನ ಸಮೇತ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.