ಕಿತ್ತು ತಿನ್ನುವ ಬಡತನವಿದ್ರು ಖಜಾನೆ ಅಧಿಕಾರಿಯಾದ ತರಕಾರಿ ಮಾರುವವರ ಮಗಳು

Public TV
2 Min Read
ctd officer copy

ಚಿತ್ರದುರ್ಗ: ಕಿತ್ತು ತಿನ್ನುವ ಬಡತನವಿದ್ದರೂ ತರಕಾರಿ ಮಾರುವವರ ಮಗಳು ಖಜಾನೆ ಅಧಿಕಾರಿ ಆಗುವ ಮೂಲಕ ಯುವ ಮನಸ್ಸುಗಳಿಗೆ ಸ್ಫೂರ್ತಿ ಆಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರದ ಮಂಜುನಾಥಪ್ಪ ಮತ್ತು ಜಯಮ್ಮರ ದ್ವಿತೀಯ ಪುತ್ರಿ ವಿನೋದಮ್ಮ ಖಜಾನೆ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರು ಎದೆಗುಂದದೇ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಪಡೆದು ಎಂ. ವಿನೋದಮ್ಮ ಯಶಸ್ಸುಗಳಿಸಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್

ctd officer 1 e1577255316450

ಶಿರಾ ತಾಲೂಕಿನ ಬೆಜ್ಜಿಹಳ್ಳಿ ಮೂಲದವರಾದ ವಿನೋದಮ್ಮನವರ ಪೋಷಕರು ಕಳೆದ 25 ವರ್ಷಗಳ ಹಿಂದೆ ಹಿರಿಯೂರು ತಾಲೂಕಿನ ಧರ್ಮಪುರಕ್ಕೆ ಜೀವನೋಪಾಯಕ್ಕಾಗಿ ಶಿಫ್ಟ್ ಆಗಿದ್ದರು. ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಬೆಳಗಿನ ಕೊರೆಯುವ ಚಳಿಯಲಿ ಮಾರುಕಟ್ಟೆ ಹಾಗೂ ತೋಟಗಳಿಗೆ ತೆರಳಿ ತರಕಾರಿಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡುತ್ತಾ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುವ ವಿನೋದಮ್ಮನವರ ಪೋಷಕರು ಇಂದು ಮಗಳ ಸಾಧನೆ ಕಂಡು ಬೆರಗಾಗಿದ್ದಾರೆ. ಇದನ್ನೂ ಓದಿ: ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

ತಂದೆ-ತಾಯಿ ಕಷ್ಟವನ್ನು ಅರ್ಥೈಸಿಕೊಂಡು ಕಷ್ಟದಲ್ಲೂ ಸಾಧಿಸಬೇಕೆಂಬ ಛಲದಿಂದ ತಮ್ಮ ವಿದ್ಯಾಭ್ಯಾಸ ಆರಂಭಿಸಿದ ವಿನೋದಮ್ಮ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೆಡ್ತೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಸ್‍ಸಿ ನರ್ಸಿಂಗ್ ಪದವಿ ಪಡೆದಿದ್ದಾರೆ. ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ಸು ಕಂಡಿದ್ದಾರೆ.

Victoria Hospital 2

ವಿನೋದಮ್ಮ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಪಿಯು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರು. ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕೂಡ ಸಿಕ್ಕಿತ್ತು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ವೈದ್ಯಕೀಯ ಶಿಕ್ಷಣ ಪಡೆಯುವಷ್ಟು ಉತ್ತಮವಾಗಿರಲಿಲ್ಲ. ಉಚಿತ ಪ್ರವೇಶ ಹಾಗೂ ವಸತಿ ವ್ಯವಸ್ಥೆ ಇರುವ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇವರ ಮುಂದಿತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣದ ಆಸೆಯನ್ನು ಬದಿಗಿಟ್ಟು, ಅರೆವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು.

ಶಿಕ್ಷಕ ಸ್ವಾಮಿ ಅವರ ಸ್ಫೂರ್ತಿದಾಯಕ ಮಾತುಗಳು ಸಾಧನೆಗೆ ನೆರವಾಗಿದ್ದು, ವೈದ್ಯ, ಎಂಜಿನಿಯರ್ ಆಗುವುದಕ್ಕಿಂತ ಆಡಳಿತಾತ್ಮಕ ಸೇವೆಗೆ ತೆರಳುವಂತೆ ಒತ್ತಿ ಹೇಳುತ್ತಿದ್ದರು. ಹೀಗಾಗಿ ಆರಂಭದಿಂದಲೂ ವಿನೋದಮ್ಮ ಸ್ಪರ್ಧಾತ್ಮಕ ಪರೀಕ್ಷೆಯತ್ತ ಚಿತ್ತ ವಹಿಸಿದ್ದರು.

exam copy

ವಿನೋದಮ್ಮ ಅವರಿಗೆ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ತರಕಾರಿ ಮಾರಾಟ ಮಾಡಿ ಬರುತ್ತಿದ್ದ ಆದಾಯದಲ್ಲಿ ಕುಟುಂಬ ನಡೆಸುವುದು ಮಂಜುನಾಥ ಅವರಿಗೆ ಕಷ್ಟವಾಗಿತ್ತು. ಹೀಗಾಗಿ ಉಚಿತ ಶಿಕ್ಷಣ ಸಿಗುವ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದರು. ಪೋಷಕರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಮೊದಲ ಪುತ್ರಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಮತ್ತೊಬ್ಬ ಪುತ್ರಿ ಗೀತಮ್ಮ ಎಂ.ಟೆಕ್ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದಾರೆ. ಕಿರಿಯ ಪುತ್ರ ಶಾಂತರಾಜು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2011 ಹಾಗೂ 2014ರಲ್ಲಿ ಕೆಪಿಎಸ್‍ಸಿ ಪರೀಕ್ಷೆ ಬರೆದಿದ್ದ ವಿನೋದಮ್ಮ ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದ ಅವಕಾಶ ಕೈತಪ್ಪಿತ್ತು. ಹೀಗಾಗಿ ಸ್ನೇಹಿತರ ಸಲಹೆ ಮೆರೆಗೆ ತರಬೇತಿ ಪಡೆಯಲು ಆರಂಭಿಸಿದ್ದರು. ಕಾರ್ಮಿಕ ಇಲಾಖೆ, ಪಂಚಾಯ್ತಿ ರಾಜ್ ಇಲಾಖೆಯ ಅಧಿಕಾರಿ ಆಗಬೇಕು ಎಂಬ ಹಂಬಲದಿಂದ ಬಡತನದಲ್ಲಿ ಬೆಳೆದಿದ್ದರಿಂದ ಸಾಮಾನ್ಯರಿಗೆ ಸೇವೆ ಮಾಡಬೇಕೆಂಬ ಮಹದಾಸೆ ಅವರಲ್ಲಿತ್ತು. ಹೀಗಾಗಿ ಛಲಬಿಡದೇ ಪ್ರಯತ್ನಿಸಿದ ಅವರ ಶ್ರಮಕ್ಕೆ ಇಂದು ಫಲ ಸಿಕ್ಕಿದ್ದು, ವಿನೋದಮ್ಮನವರ ಸಾಧನೆಗೆ ಕುಟುಂಬ ಹಾಗೂ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *