ಹುಬ್ಬಳ್ಳಿ: ಮಾಜಿ ಪ್ರಧಾನಿ ಹಾಗೂ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ (ManMohan Singh) ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ (Veerendra Heggade) ಕಂಬನಿ ಮಿಡಿದರು.
ಹುಬ್ಬಳ್ಳಿಯ (Hubballi) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಸ್ವಯಂ ಪ್ರಚಾರ ಮಾಡಿಕೊಳ್ಳದೇ, ಪ್ರಶಸ್ತಿಗಳನ್ನ ಸ್ವೀಕಾರ ಮಾಡದೇ ದೇಶಸೇವೆ ಮಾಡಿದರು. ರಾಜ್ಯ ಸಭೆಗೆ ವ್ಹೀಲ್‌ಚೇರ್‌ನಲ್ಲೇ ಬಂದು ಕುಳಿತುಕೊಳ್ಳುತ್ತಿದ್ದರು. ತಾವು ಪ್ರಧಾನಿಯಾಗಿದ್ದಾಗ ಅನೇಕ ಕಠಿಣ ಕಾನೂನುಗಳನ್ನ ಜಾರಿಗೊಳಿಸಿದರು. ಆರ್ಥಿಕತೆಯಲ್ಲಿ ಪ್ರಗತಿ ತಂದರಲ್ಲದೇ ದೇಶದ ಸುಸ್ಥಿರ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಈ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದಾಗ ʻಗ್ರಾಮ ಭಾರತʼ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ದೇಶದ ಪ್ರಧಾನಿ ಆದ ಬಳಿಕ ದೇಶ ಬಹಳ ಅದ್ಭುತ ಆರ್ಥಿಕ ಪ್ರಗತಿ ಕಂಡಿದೆ ಎಂದು ನುಡಿದರು.
ಇಂದು ದೇಶ ಶ್ರೇಷ್ಠ ಆರ್ಥಿಕ ತಜ್ಞನನ್ನ ಕಳೆದುಕೊಂಡಿದೆ. ಆದ್ರೆ ಅವರು ಹಾಕಿದ ಬೀಜ ವೃಕ್ಷವಾಗಿ ಬೆಳೆದು ನಮ್ಮ ದೇಶಕ್ಕೆ ಶಕ್ತಿ ಕೊಡುತ್ತಿದೆ. ಹಾಗಾಗಿ ಇದು ಸಭೆಯಲ್ಲ, ಅವರಿಗೆ ಗೌರವ ಹಾಗೂ ಸಂತಾಪ ಸೂಚಿಸುವ ಕಾರ್ಯಕ್ರಮವಾಗಿದೆ. ದೇಶಕ್ಕಾಗಿ ದುಡಿದ ಅವರನ್ನ ನಾವೆಲ್ಲ ಸ್ಮರಿಸಬೇಕು ಎಂದು ನೆನೆದರು.