ಬೆಂಗಳೂರು: ಜಾತಿ ಜನಗಣತಿ (Caste Census) ಸರಿಯಾಗಿ ನಡೆದಿಲ್ಲ. ಸಮುದಾಯದ ಗಣತಿ ಮತ್ತೊಮ್ಮೆ ಮಾಡಬೇಕು ಎಂಬ ಆಗ್ರಹ ವೀರಶೈವ (Veerashaiva Lingayat) ನಾಯಕರಲ್ಲಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿಯಲ್ಲಿ (Kantharaj Commission) ಏನಿದೆ ಯಾರಿಗಾದ್ರೂ ಗೊತ್ತಿದೆಯಾ? ಜಾತಿ ಜನಗಣತಿ ಬಗ್ಗೆ ಯಾರದ್ದೂ ವಿರೋಧ ಇಲ್ಲ. ಅದರಲ್ಲಿ ರಾಜಕೀಯವೂ ತರಬಾರದು. ಲಿಂಗಾಯತ ಸಮುದಾಯದ ನಾಯಕರು ವೈಜ್ಞಾನಿಕ ಸಮೀಕ್ಷೆ ಆಗಲಿ ಎಂದು ಹೇಳ್ತಿದ್ದಾರೆ. 2011 ರಲ್ಲಿ ಜನಗಣತಿ ಆಗಿದ್ದು. ಇನ್ನೂ ಜನಗಣತಿ ಆಗಿಲ್ಲ. ಜನಗಣತಿ ಸಮಯದಲ್ಲೇ ಜಾತಿ ಗಣತಿ ಮಾಡಬೇಕು ಎಂಬ ಕೂಗಿದೆ. ಈ ಬಗ್ಗೆ ಸಿಎಂಗೆ ಭೇಟಿ ಮಾಡಿ ಅಭಿಪ್ರಾಯ ತಿಳಿಸಿದ್ದೇವೆ ಎಂದರು.
ಯಾವ ಸಮುದಾಯಕ್ಕೂ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ವರದಿ ಬಿಡುಗಡೆ ಆಗಬೇಕಾ? ಬೇಡವಾ? ಎಂಬುದನ್ನು ಸಚಿವ ಸಂಪುಟದಲ್ಲಿಯೇ ಚರ್ಚೆ ಮಾಡುತ್ತೇವೆ. ವರದಿ ಕ್ಯಾಬಿನೆಟ್‌ಗೆ ಬಂದ ಬಳಿಕ ಅಲ್ಲಿಯೇ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಹತ್ತು ವರ್ಷ ವರದಿ ವಿಳಂಬ ಆಗಿದೆ. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದಿದೆ. ಒಂದು ಸಮುದಾಯದ ಜನಸಂಖ್ಯೆ ವರದಿಯಲ್ಲಿ ಕ್ಷೀಣವಾಗುತ್ತಿದ್ದರೆ ಶಂಕೆ ಬರುವುದಿಲ್ವಾ? ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಮತ್ತೊಮ್ಮೆ ಸಮೀಕ್ಷೆ ಮಾಡಬೇಕು ಎಂಬ ಆಗ್ರಹವಿದೆ ಎಂದಿದ್ದಾರೆ.