ಶಿವಮೊಗ್ಗ: ದಸರಾ ಹಿನ್ನೆಲೆ ಇಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಸರಾ ಮೆರವಣಿಗೆ ಜೋರಾಗಿ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಭಾನುಮತಿ ಆನೆ ತುಳಿತಕ್ಕೊಳಗಾಗಿ ವೀರಗಾಸೆ ಕಲಾವಿದರೊಬ್ಬರು ಗಾಯಗೊಂಡಿದ್ದಾರೆ.
ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಘಟನೆ ನಡೆದಿದೆ. ಶಿವಮೊಗ್ಗ ನಗರ ಸಮೀಪದ ಅರಕೆರೆ ನಿವಾಸಿಯಾಗಿರುವ ವೀರಗಾಸೆ ಕಲಾವಿದ ಸತೀಶ್ ಆನೆ ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾರೆ. ದಸರಾ ಮೆರವಣಿಗೆಯಲ್ಲಿ ವೀರಗಾಸೆ ತಂಡದಲ್ಲಿ ಸತೀಶ್ ಕೂಡ ಇದ್ದರು. ಮೆರವಣಿಗೆ ಮುನ್ನ ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಅವಘಡ ಸಂಭವಿಸಿ ಕೆಲ ಕಾಲ ಸತೀಶ್ ಅವರು ಅಸ್ವಸ್ಥಗೊಂಡಿದ್ದರು. ಬಳಿಕ ಚೇತರಿಸಿಕೊಂಡಿದ್ದಾರೆ. ಸದ್ಯ ಸತೀಶ್ ಅವರ ಕಾಲಿಗೆ ಗಾಯವಾಗಿರುವ ಕಾರಣಕ್ಕೆ ಕಾಲು ಊರಲಾಗದೇ ನೋವು ಅನುಭವಿಸುತ್ತಿದ್ದಾರೆ. ಗಾಯಗೊಂಡ ಸತೀಶ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ತಹಶೀಲ್ದಾರ್ ಗಿರೀಶ್ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ನಗರದ ಶಿವಪ್ಪ ನಾಯಕ ಕೋಟೆ ಆವರಣದಿಂದ ದಸರಾ ಮೆರವಣಿಗೆ ಆರಂಭಗೊಂಡಿದ್ದು, ಅಂಬಾರಿ ಹೊತ್ತ ಸಾಗರ್ ಆನೆ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆಗೂ ಮುನ್ನ ಆನೆಗೆ ಹೂ ಮಳೆಯ ಸ್ವಾಗತ ಕೋರಿ, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಅಸ್ವಸ್ಥವಾಗಿದ್ದ ಸಾಗರ್ ಆನೆ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
ಮೆರವಣಿಗೆಯಲ್ಲಿ ಹಲವು ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದು, ಈ ಬಾರಿಯ ಮೆರವಣಿಗೆಯಲ್ಲಿ ಅರಣ್ಯ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆಯ ಟ್ಯಾಬ್ಲೋಗಳು ಎಲ್ಲರ ಗಮನ ಸೆಳೆಯುತ್ತಿದೆ. ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದಾರೆ.