ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

Public TV
2 Min Read
laxmi vatal sara govindu

ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಕೆಟ್ಟ ಮಹಿಳೆಯಾಗಿದ್ದು, ಕನ್ನಡಿಗರ ಪಾಲಿಗೆ ಪಿಶಾಚಿ ಮತ್ತು ದೆವ್ವ ಎಂದು ವಾಟಾಳ್ ನಾಗರಾಜ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ, ಪ್ರವೀಣ್ ಶೆಟ್ಟಿ ಬಣ, ಕರವೇ ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಗರದ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮತ್ತು ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‍ಗೆ ಇಪ್ಪತ್ತೆಂಟು ಗಂಟೆಗಳ ಕಾಲ ಗಡುವು ನೀಡುತ್ತೇವೆ. ಹೆಬ್ಬಾಳ್ಕರ್ ಅವರನ್ನು ಮಹಿಳಾ ಅಧ್ಯಕ್ಷ ಗಿರಿಯಿಂದ ಕೆಳಗಿಳಿಸಿ ಇಲ್ಲದಿದ್ದರೆ ನಾವು ಬೆಳಗಾವಿಯಿಂದ ಗಡಿಪಾರು ಮಾಡುವುದ್ದಕ್ಕೆ ಜಿಲ್ಲಾಡಳಿತಕ್ಕೆ ಹೇಳುತ್ತೇವೆ ಎಂದು ಆಗ್ರಹಿಸಿದರು.

 

ಒಂದು ವೇಳೆ ಹುದ್ದೆಯಿಂದ ಕೆಳಗಡೆ ಇಳಿಸದೇ ಇದ್ದಲ್ಲಿ, ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಆಕೆಗೆ ತಲೆ ಸರಿಯಿಲ್ಲ ಆಕೆಯನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್‍ಗೆ ನಾಚಿಕೆಯಾಗಬೇಕು. ಕನ್ನಡಿಗರ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಅವರ ನಾಟಕದ ಕ್ಷಮೆ ನಮಗೆ ಬೇಕಾಗಿಲ್ಲ, ಅದನ್ನು ನಾವು ಒಪ್ಪಿಕೊಳ್ಳುವುದ್ದಿಲ್ಲ. ಲಕ್ಷ್ಮೀ ಅವರನ್ನು ಗಡಿಪಾರು ಮಾಡಲಿ ಮತ್ತು ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಗಳೇ, ಪರಮೇಶ್ವರ್, ದಿನೇಶ್ ಗುಂಡುರಾವ್ ಹೆಬ್ಬಾಳ್ಕರ್ ವಿರುದ್ಧ ಏನ್ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

ಇಂಧನ ಸಚಿವ ಡಿಕೆ ಶಿವಕುಮಾರ್ ಲಕ್ಷ್ಮಿ ಅವರ ಸಮರ್ಥನೆಗೆ ಇಳಿದಿದ್ದಾರೆ. ನಿಮಗೆ ಮರಾಠಿ ಬರುತ್ತಾ? ಭಾಷೆ ಬರದೆ ಇದ್ದರೆ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಿರಾ? ಗ್ಲಾಮರ್ ಮತ್ತು ದುಡ್ಡು ಇದೆ ಅಂತಾ ಆಟವಾಡುತ್ತಿದ್ದೀರ? ಕನ್ನಡ ಪರ ಏನು ಕೆಲಸ ಮಾಡಿದ್ದೀರಾ? ಸಂಬಾಜಿ ಪಾಟೀಲ್ ಕನ್ನಡಿಗರ ಶವ ಯಾತ್ರೆ ಮಾಡುತ್ತೀನಿ ಎಂದಾಗ ಎಲ್ಲಿ ಹೋಗಿತ್ತು ನಿಮ್ಮ ಆಕ್ರೋಶ? ಶನಿವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ದೊಡ್ಡ ಹೋರಾಟ ಮಾಡುತ್ತೇವೆ. ಆಕೆಯನ್ನು ಪಕ್ಷದಿಂದ ಕಿತ್ತು ಹಾಕದಿದ್ದರೆ ಉಗ್ರಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *