ಬೆಂಗಳೂರು: ಮಹದಾಯಿಗಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಳತ್ವದಲ್ಲಿ ಇಂದು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಕರಾಳ ದಿನಾಚರಣೆ ನಡೆಯಲಿದೆ.
ಇದರಲ್ಲಿ ಚಿತ್ರರಂಗದವರು ಕೂಡ ಪಾಲ್ಗೊಳ್ಳಲಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ಹೋರಾಟಕ್ಕೆ ಸಾಥ್ ಕೊಡಲಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜಕೀಯ ಖಂಡಿಸಿ ಈ ಹೋರಾಟ ನಡೆಯಲಿದೆ.
ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಸೇರಿದಂತೆ ರಾಜಕಾರಣಿಗಳ ವಚನ ಭ್ರಷ್ಟತೆ ಖಂಡಿಸಿ ಬುಧವಾರ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಅದರಲ್ಲೂ ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ನೀಡೋಕೆ ಹೋದರೆ ಅಲ್ಲಿ ಅವಮಾನ ಆಯ್ತು. ಒಂದು ಕಡೆ ರಾಜಕಾರಣಿಗಳಿಂದ ಭರವಸೆ ಸಿಗಲಿಲ್ಲ. ಮತ್ತೊಂದು ಕಡೆ ರಾಜ್ಯದ ಪ್ರಥಮ ಪ್ರಜೆ ಭೇಟಿಗೆ ಅವಕಾಶ ಕೊಡಲಿಲ್ಲ.
ಇದರಿಂದ ನಿರಾಶಿತರಾದ ಮಹದಾಯಿ ಹೋರಾಟಗಾರರು ರಾತ್ರಿಯೇ ತಮ್ಮ ಊರುಗಳತ್ತ ತೆರಳಿದ್ದು, ಕೆಲವರು ಈಗಲೂ ತೆರಳುತ್ತಿದ್ದಾರೆ. ಐದು ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದ ರೈತರು ನಿರಾಸೆಯಿಂದಲೇ ಹೋಗುತ್ತಿದ್ದಾರೆ.