ಕೋಲಾರ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಶುಕ್ರವಾರ ಕೋಲಾರದ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ನಿಲ್ದಾಣದೊಳಗೆ ಪೊಲೀಸರು ಪ್ರವೇಶ ನೀಡದಿದ್ದಾಗ ಯಾವುದೇ ಚಳುವಳಿ ಮಾಡಲ್ಲ. ರೈಲ್ವೇ ನಿಲ್ದಾಣದಲ್ಲಿನ ಮೂಲಭೂತ ಸಮಸ್ಯೆಗಳ ವೀಕ್ಷಣೆಗೆ ಬಂದಿದ್ದೇನೆ ಎಂದು ವಾಟಾಳ್ ನಾಗರಾಜ್ ಪೊಲೀಸರಿಗೆ ಸ್ಪಷ್ಟಪಡಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಬಂಗಾರಪೇಟೆ ಕೋಲಾರ ಮಾರ್ಗವಾಗಿ ಸಂಚರಿಸುತ್ತಿದ್ದ ರೈಲನ್ನ ಕಳೆದ ಒಂದು ತಿಂಗಳಿನಿಂದ ನಿಲ್ಲಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆ ಆ ರೈಲನ್ನ ಪ್ರಾರಂಭಿಸಬೇಕಿದೆ. ಅಲ್ಲದೆ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕೆಂದು ಹದಿನೈದು ದಿನಗಳ ಗಡುವನ್ನ ಕೊಟ್ಟರು. ಮುಂದಿನ 28 ರಂದು ಕೋಲಾರದಲ್ಲಿ ಚಳುವಳಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
Advertisement
Advertisement
ಇದೇ ವೇಳೆ ನೂತನವಾಗಿ ಜಾರಿಯಾಗಿರುವ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ದಂಡವನ್ನ ಕಡಿಮೆ ಮಾಡಬೇಕೆಂದು ಸೂಚಿಸಿದರು. ರೈಲ್ವೇ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಸಿಗುತ್ತಿಲ್ಲ. ರಾಜ್ಯ ಸಂಸದರಿಗೆ ಸಂಸತ್ ನಲ್ಲಿ ಮಾತನಾಡುವ ಧೈರ್ಯವಿಲ್ಲ. ರೈಲ್ವೇ ಇಲಾಖೆಯಲ್ಲಿ ಎಲ್ಲೆಲ್ಲಿ ಕನ್ನಡಿಗರಿದ್ದಾರೆ ಎಂಬುದರ ಶ್ವೇತಪತ್ರ ಹೊರಡಿಸಿ ಎಂದು ಗುಡುಗಿದರು.