ಚಾಮರಾಜನಗರ: ಗಡಿ ಕ್ಯಾತೆ ತೆಗೆಯುವ ಶಿವಸೇನೆ ಶಾಸಕರು ಅಥವಾ ಮಂತ್ರಿಗಳು ಬೆಳಗಾವಿಗೆ ಬಂದರೆ ಕೂಡಲೇ ಅವರನ್ನು ಅರೆಸ್ಟ್ ಮಾಡಬೇಕು ಇಲ್ಲವೆ ಗಡಿಪಾರು ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು ಬೆಳಗಾವಿಗೆ ನನ್ನನ್ನೇ ಬಿಡುತ್ತಿಲ್ಲ. 50 ಕಿಲೋ ಮೀಟರ್ ದೂರದಲ್ಲೇ ಅರೆಸ್ಟ್ ಮಾಡಿ ವಾಪಸ್ ಕಳುಹಿಸುತ್ತಾರೆ. ಹಾಗಾಗಿ ಮಹಾರಾಷ್ಟ್ರದಿಂದ ಶಾಸಕರು, ಮಂತ್ರಿಗಳು ಬೆಳಗಾವಿಗೆ ಬಂದು ಗಡಿ ಬಗ್ಗೆ ಮಾತನಾಡಲು ಅವಕಾಶ ಕೊಡಬಾರದು. ಸ್ವತ: ಉದ್ಧವ್ ಠಾಕ್ರೆ ಬಂದರೂ ಸಹ ಬಿಡದೆ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಗಡಿ ವಿಚಾರದಲ್ಲಿ ಮಹಾಜನ್ ವರದಿಯನ್ನೇ ಅಂತಿಮ ಮಾಡುವಂತೆ ಎಚ್ಚರಿಕೆ ನೀಡಿದರು.
ಜನಮತ ಗಣನೆ ನಡೆಯಬೇಕು ಎನ್ನುವ ಮಹಾರಾಷ್ಟ್ರ ಶಿವಸೇನೆ ನಾಯಕ ಸಂಜಯ್ ರಾವತ್ ಗೆ ತಲೆ ಸರಿ ಇಲ್ಲ, ಬಾಳೆ ಠಾಕ್ರೆ ತೀರ ಹುಚ್ಚನಾಗಿದ್ದ, ಅವರ ಮಗ ಉದ್ಧವ್ ಠಾಕ್ರೆ ಅರೆಹುಚ್ಚನಾಗಿದ್ದಾನೆ. ಈ ಸಂಜಯ್ ರಾವತ್ ಇನ್ನೂ ಹುಚ್ಚನಾಗಿದ್ದಾನೆ ಎಂದು ಏಕವಚನದಲ್ಲಿಯೇ ಕಿಡಿಕಾರಿದರು. ಜನಮತಗಣನೆ ನಡೆಯುವುದಾದರೆ ಮೊದಲು ಮುಂಬೈನಲ್ಲಿ ನಡಯಲಿ. ಅಲ್ಲಿ ನಲವತ್ತು ಲಕ್ಷ ಕನ್ನಡಿಗರಿದ್ದಾರೆ. ಅರ್ಧ ಮುಂಬೈ ನಮ್ಮದಾಗುತ್ತದೆ ಎಂದು ಹೇಳಿದರು.


