ಬೆಂಗಳೂರು: ಕಾಲಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿನಿಮಾ ಪ್ರದರ್ಶನ ಮಾಡದಂತೆ ರಾಜ್ಯದ್ಯಾಂತ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ಕನ್ನಡ ಸಂಘ ಒಕ್ಕೂಟ ಸಂಘದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು ನಗರದ ಮೇಖ್ರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಜನಿಕಾಂತ್ ಕನ್ನಡ ನಾಡಿನ ದ್ರೋಹಿ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರ ಸಿನಿಮಾಗಳನ್ನು ಕರ್ನಾಟದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರೈ ವಿರುದ್ಧ ವಾಗ್ದಾಳಿ: ತಮಿಳು ಕಾಲಾ ಚಿತ್ರಕ್ಕೂ ಕಾವೇರಿಗೂ ಏನು ಸಂಬಂಧ ಎಂದು ಈ ಹಿಂದೆ ಪ್ರಶ್ನೆ ಮಾಡಿದ್ದ ಬಹು ಭಾಷಾ ನಟ ಪ್ರಕಾಶ್ ರೈ ಅವರ ಮಾತಿಗೆ ತಿರುಗೇಟು ನೀಡಿದ ವಾಟಾಳ್ ಅವರು, ಪ್ರಕಾಶ್ ರೈ ಚೌ ಚೌ ಬಾತ್ ಅತ್ತ ಕನ್ನಡಿನೂ ಅಲ್ಲ ತಮಿಳಿಗನೂ ಅಲ್ಲ. ಪ್ರಕಾಶ್ ರೈ ಯಾರು? ಅವನು ಈ ರೀತಿ ವಿರೋಧ ಮಾತಾನಾಡಿಯೇ ದೊಡ್ಡ ಮನುಷ್ಯನಾಗಿದ್ದು. ಪ್ರಕಾಶ್ ರೈ ಹುಟ್ಟುವ ಮೊದಲು ನಾನು ಹೋರಾಟ ಮಾಡಿದ್ದೇನೆ. ರಜನಿಗೆ ಬೆಂಬಲ ಕೊಡಲು ಅವನು ಯಾರು ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ಕನ್ನಡ ನಟರ ವಿರುದ್ಧ ವಾಗ್ದಾಳಿ: ಕಾವೇರಿ ಪರ ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಸಿನಿಮಾ ಮಂದಿ ಬೆಂಬಲ ನೀಡಲ್ಲ. ಕನ್ನಡಿಗ ಸಿನಿಮಾ ರಂಗದವರು ಎಲ್ಲಿ ಹೋದರು? ಎಲ್ಲ ಬೆಳ್ಳಿತಟ್ಟೆಯಲ್ಲಿ ಊಟ ಮಾಡುವವರು. ಇದೇ ರೀತಿ ನಡೆದರೆ ಮುಂದಿನ ದಿನಗಳಲ್ಲಿ ಕನ್ನಡ ನಟರ ಮನೆ ಮುಂದೆಯೇ ಸತ್ಯಾಗ್ರಹ ಮಾಡುತ್ತೇವೆ. ಒಬ್ಬರು ರಜನಿ ಬಗ್ಗೆ ಧ್ವನಿಯೆತ್ತಿಲ್ಲ. ಎಲ್ಲಾ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಕೆಲ ದಿನಗಳ ಹಿಂದೆ ನಟ ಕಮಲ್ ಹಾಸನ್ ಕದ್ದು ಮುಚ್ಚಿ ಸಿಎಂ ಭೇಟಿಯಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಯಾಕೆ ಕನ್ನಡ ವಿರೋಧಿಗಳನ್ನು ಭೇಟಿಯಾಗಬೇಕು. ಈ ಹಿಂದೆ ಕಾವೇರಿ ಸಮಸ್ಯೆ ಚರ್ಚೆ ನಡೆಸಲು ಜಯಲಲಿತಾ, ಡಿಎಂಕೆ ಕರುಣಾನಿಧಿ ಬಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾತ್ರ ಈ ರೀತಿ ನಡೆ ನಡೆಸುವುದು ಉತ್ತಮವಲ್ಲ. ರಜನಿಕಾಂತ್, ಕಮಲ್ ಹಾಸನ್ ರನ್ನು ಕನ್ನಡದ ನೆಲಕ್ಕೆ ಕಾಲಿಡಕ್ಕೆ ಬಿಡಲ್ಲ ಎಂದರು.
ಹೋರಾಟ ವೇಳೆ ಪೊಲೀಸರು ಬಂಧನ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದರೆ, ಕರ್ನಾಟಕ ಎಲ್ಲಾ ಭಾಗಗಳಲ್ಲೂ ಸಿನಿಮಾ ವಿರುದ್ಧ ಹೋರಾಟ ಮುಂದುವರೆಸುತ್ತೇವೆ. ಹೋರಾಟ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ. ಯಾವುದೇ ಕಾರಣಕ್ಕೂ ಸಿನಿಮಾ ಪ್ರದಶನಕ್ಕೆ ಅವಕಾಶ ನೀಡಲ್ಲ ಎಂದರು.