– ಸಿಎಂ ಸೇರಿದಂತೆ ಎಲ್ಲಾ ಮಂತ್ರಿಗಳೂ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ
ರಾಮನಗರ: ಮೈಸೂರು ಸ್ಯಾಂಡಲ್ ಸೋಪ್‌ಗೆ (Mysore Sandal Soap) ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ಗೆ 6.20 ಕೋಟಿ ರೂ. ನೀಡಿ ನಟಿ ತಮನ್ನಾ ಭಾಟಿಯಾರನ್ನ (Tamannaah Bhatia) ರಾಯಭಾರಿಯಾಗಿ ನೇಮಕ ಮಾಡಿಕೊಂಡಿರುವ ವಿಚಾರಕ್ಕೆ ರಾಮನಗರದಲ್ಲಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ತಮಿಳು, ತೆಲುಗಿನವರು ಯಾರೂ ಬೇಡ. ಶ್ರೀಗಂಧ, ಮೈಸೂರು ಇವೆರಡೂ ಸಹ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿ ಎಂದಿದ್ದಾರೆ.
ತಮನ್ನಾಗೆ 6.20 ಕೋಟಿ ರೂ. ಕೊಟ್ಟಿರೋದರಲ್ಲಿ ದೊಡ್ಡ ರಾಜಕೀಯ ಇದೆ. ಸಿಕ್ಕಸಿಕ್ಕವರಿಗೆ ಕೋಟಿ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತೆ. ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ ಅಂತ ವಾಟಾಳ್ ಹೇಳಿದ್ದಾರೆ.
ಆಂಧ್ರಕ್ಕೆ ಕೊಟ್ಟ ಆನೆಗಳನ್ನ ವಾಪಸ್ ತರಿಸಿಕೊಳಳಬೇಕು:
ಇನ್ನೂ ರಾಜ್ಯದ ಆನೆಗಳನ್ನು ಆಂಧ್ರಕ್ಕೆ ಕೊಟ್ಟ ವಿಚಾರ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಅವನು ಯಾರೋ ಪವನ್ ಅನ್ನೋನು ಬಂದು ಕನ್ನಡದಲ್ಲಿ ಮಾತನಾಡಿಬಿಟ್ನಂತೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಇವರಿಗೆ ಸ್ವರ್ಗ ಬಂದ ಹಾಗೆ ಆಗೋಗಿದೆ. ಅಲ್ಲಿ ತಿರುಪತಿ ಹೋದ್ರೆ, ಸರಿಯಾಗಿ ನೋಡಿಕೊಳ್ಳಲ್ಲ. ಆನೆ ನಾವು ಕರ್ನಾಟಕದಲ್ಲಿ ಸಾಕಿದ್ದೇವೆ. ನಾವು ಸಾಕಿದ ಮಗುವನ್ನ ಬೇರೆಯವರಿಗೆ ಕೊಟ್ರೆ ಹೇಗೆ.? ನಾವು ಸಾಕಿದ್ದೇವೆ, ಪಳಗಿಸಿದ್ದೇವೆ, ನಮ್ಮಲ್ಲಿ ಯಾರು ದಿಕ್ಕಿಲ್ಲ ಅಂತಾ ಬೇವರ್ಸಿಗಳ ತರ ಕೊಡಬಾರದು. ಇದು ಪ್ರಾಣಿಗಳಿಗೆ ಮಾಡಿದಂತಹ ಮಹಾ ದ್ರೋಹ. ಎರಡು ರಾಜ್ಯದ ಸಂಬಂಧಗಳ ಬಾಂಧವ್ಯಕ್ಕೆ ಆನೆ ಕೊಟ್ಟಿದ್ದಾರೆ ಎಂಬ ವಿಚಾರ ಚರ್ಚೆ ಆಗ್ತಿದೆ. ಇದಕ್ಕೆ ಆನೆಯನ್ನೇ ಯಾಕೆ ಕೊಡಬೇಕು, ಹುಲಿ ಕೊಡಲಿ. ಕರ್ನಾಟಕದಲ್ಲಿ ಆನೆಗೆಳು ಅದ್ಬುತವಾಗಿವೆ. ನಮ್ಮ ರಾಜ್ಯ ಬಿಟ್ಟು ಹೋಗುವಾಗ ಆನೆಗಳು ಕಣ್ಣೀರು ಹಾಕಿದ್ದವು. ಆನೆಗಳ ಕಣ್ಣಲ್ಲಿ ನೀರು ಬರಬಾರದು. ಪವನ್ ಕಲ್ಯಾಣ್ ಗೆ ಹೇಳಿ ವಾಪಸ್ ಆನೆಗಳನ್ನ ಕರೆಸಿಕೊಳ್ಳಬೇಕು ಎಂದು ರಾಮನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಹೇಳಿಕೆ ನೀಡಿದ್ದಾರೆ.