ಬೆಂಗಳೂರು: ಮಂಜಿನ ನಗರಿ ಕೊಡಗು ಪ್ರವಾಹಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಲಿ ಹಂಡೆಗಳೊಂದಿಗೆ ಆಗಮಿಸಿದ ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೊಡಗಿನ ವಿಚಾರದಲ್ಲಿ ರಾಜ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಜನರ ಸಂಕಷ್ಟಕ್ಕೆ ಕೂಡಲೇ ನೆರವು ನೀಡಬೇಕು. ಜನರ ಪರಿಸ್ಥಿತಿ ನರಕ ದೃಶ್ಯವಾಗಿದ್ದು, ಸರ್ಕಾರದ ನೆರವು ನಿಧಾನವಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
Advertisement
ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ
ಕೊಡಗಿನಲ್ಲಿ ಮರಣ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ. ಇತ್ತ ವರುಣನ ಅಬ್ಬರದಿಂದ ಗುಡ್ಡ ಕುಸಿಯೋದು ನಿಂತಿಲ್ಲ. ತಿನ್ನಲು ಆಹಾರವಿಲ್ಲ. ಕಾಲಿನ ಅಡಿಯಲ್ಲಿ ನೀರಿದ್ರೂ ಕುಡಿಯೋ ನೀರಿಗಾಗಿ ಪರದಾಟ. ಕರೆಂಟೂ ಇಲ್ಲ. ಕೊಡವರ ಬದುಕಲ್ಲಿ ಕತ್ತಲು ಆವರಿಸಿದೆ. ಹೌದು ಮಹಾ ರಣಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ತತ್ತರಿಸಿಹೋಗಿದೆ.
Advertisement
Advertisement
ಮರಣ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ನೂರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಭೋರ್ಗರೆಯುತ್ತಿರೋ ನದಿಗಳು, ಮನೆ, ಶಾಲೆ ತೋಟ, ರಸ್ತೆ ಹೀಗೆ ಎಲ್ಲವನ್ನ ಆಪೋಷನ ತೆಗೆದುಕೊಳ್ತಿವೆ. ಮಳೆಯಿಂದ ಸಂಪರ್ಕ ಕಳೆದುಕೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 31 ಕಡೆ ಗಂಜಿಕೇಂದ್ರ ತೆರೆಯಲಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳು ಖಾಲಿಯಾಗಿದೆ. 845 ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.
Advertisement
ಸೋಮವಾರಪೇಟೆಯ ಮುಕ್ಕೋಡ್ಲು ಗ್ರಾಮವಂತೂ ವರುಣನ ಅಬ್ಬರಕ್ಕೆ ಹೈರಾಣಾಗಿದೆ. ಗಂಟೆಗಂಟೆಗೂ ಗುಡ್ಡ ಕುಸಿಯುತ್ತಿದೆ. ಗುಡ್ಡದ ಜೊತೆ ಮನೆಗಳು ಧರಾಶಾಹಿಯಾಗ್ತಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ನದಿಯಂತೆ ಭಾಸವಾಗ್ತಿದೆ. ಮಕ್ಕಂದೂರು, ಕಾಡನಕೊಲ್ಲಿ, ಮಂದಲಪಟ್ಟಿ, ಕಾಟಿಕೇರಿ, ಮಕ್ಕಳಗುಡಿಯಲ್ಲಿ ಗುಡ್ಡಗಳ ಕುಸಿತ ಮುಂದುವರೆದಿದೆ. ಗುಡ್ಡದ ಕೆಳಗಿನ ಕಟ್ಟಡಗಳು ಭೂಸಮಾಧಿಯಾಗ್ತಿವೆ. ಕಾಡುಗಳು ನೆಲಸಮವಾಗ್ತಿವೆ.
ಮುಕ್ಕೋಡ್ಲು, ಇಗೋಡ್ಲು ಹಾಗೂ ಹಟ್ಟಿ ಹೊಳೆಯಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್.ಡಿ.ಆರ್.ಎಫ್ ತಂಡಗಳು ಹರಸಾಹಸ ಪಡುತ್ತಿವೆ. ಈ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಡ್ಡಿಯುಂಟಾಗಿದೆ. ಅಲ್ಲದೇ ಮುಕ್ಕೋಡ್ಲು ಗ್ರಾಮವೊಂದರಲ್ಲೇ ಸುಮಾರು 60ಕ್ಕೂ ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿದ್ದು, ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಕೇವಲ ಹೆಲಿಕಾಪ್ಟರ್ ಮೂಲಕವೇ ಸಂತ್ರಸ್ಥರನ್ನು ರಕ್ಷಣೆಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಸುರಿಯುತ್ತಿರುವ ಭಾರೀ ಮಳೆಯಿಂದ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಿಲಿಟರಿ ಅಧಿಕಾರಿಗಳು ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಲಿಕಾಪ್ಟರ್‍ಗಳನ್ನು ಇಳಿಸಲು ಸಹ ಕಷ್ಟವಾಗುತ್ತಿದೆ ಎಂದು ವಾಯುಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv