ಕನ್ನಡದ ಹೆಸರಾಂತ ನಟ ವಸಿಷ್ಠ ಸಿಂಹ ಲಂಡನ್ (London) ಗೆ ಹಾರಿದ್ದರು. ಲಂಡನ್ ಸುಂದರ ಸ್ಥಳಗಳಲ್ಲಿ ನಟಿ ಸ್ಟೆಫಿ ಪಟೇಲ್(Stefy patel) ಜೊತೆ ಕಾಣಿಸಿಕೊಂಡಿದ್ದಾರೆ. ಅರೇ.. ಹರಿಪ್ರಿಯಾ ಜೊತೆ ಮದುವೆಯಾಗಿರೋ ವಸಿಷ್ಠ.. ಆ ನಟಿಯ ಜೊತೆ ಅಲ್ಲೇಕೆ ಕಾಣಿಸಿಕೊಂಡರು ಅಂತ ಅಚ್ಚರಿ ಪಡಬೇಡಿ. ಈ ಜೋಡಿ ನಟನೆಯ ಲವ್ ಲಿ (Love Li) ಸಿನಿಮಾದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಅಲ್ಲಿಗೆ ಹಾರಿತ್ತು.
ವಸಿಷ್ಠ ಸಿಂಹ (Vasishtha Simha) ನಟನೆ ಅಂತ ಬಂದ್ರೆ ರೋಸ್ ಹಿಡಿದು ಹೀರೋ ಆಗೋಕು ರೆಡಿ, ಲಾಂಗ್ ಹಿಡಿದು ವಿಲನ್ ಆಗೋಕೂ ಸೈ, ಅಷ್ಟೇ ಅಲ್ಲ ಗಾಯನಕ್ಕೂ ಸೈ ಎನಿಸಿಕೊಂಡಿರುವ ಕಂಚಿನ ಕಂಠದ ನಟ. ಶಿವಣ್ಣನ ಜೊತೆ ಟಗರು ನಲ್ಲಿ ಚಿಟ್ಟೆಯಾಗಿ ಮಿಂಚಿದ ವಸಿಷ್ಠ ಸಿಂಹ ಸ್ಟೈಲಿಶ್ ಲುಕ್ ನಲ್ಲಿ ‘ಲವ್ ಲಿ’ ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಅಪ್ ಡೇಟ್ ಗಳು ಕೂಡ ಗಮನ ಸೆಳೆಯುತ್ತಿವೆ.
ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಕಾಣಿಸಿಕೊಂಡಿದ್ದಾರೆ. ಹಿಂದಿ, ಕೊರಿಯನ್, ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ.
‘ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ‘ಲವ್ ಲಿ’ ಚಿತ್ರಕ್ಕಿದೆ.