ಉಡುಪಿ: ವಶಿಷ್ಟ ಯಾದವ್ ಎಂಬ ಉತ್ತರ ಪ್ರದೇಶ ಮೂಲದ ಬ್ಯುಸಿನೆಸ್ ಮ್ಯಾನ್ ಉಡುಪಿಯಲ್ಲಿ ಕೊಲೆಯಾಗಿದ್ದಾನೆ. ನವೀ ಮುಂಬೈನ ಕೋಟಿ ಕುಳ ರಾಜಕಾರಣಿಗಳು, ಮಾಫಿಯಾಗಳ ಜೊತೆ ನಂಟು ಬೆಳೆಸಿಕೊಂಡು ಹಣಕಾಸಿನಲ್ಲಿ ಬೆಳೆದಿದ್ದ ವಶಿಷ್ಟ ಯಾದವ್ ಶವವಾಗಿ ಬೆಳ್ಳಂಪಳ್ಳಿಯಲ್ಲಿ ಸಿಕ್ಕಿದ್ದು ಬಹಳ ನಿಗೂಢವಾಗಿತ್ತು.
ಮುಂಬೈನ ಲೇಡಿಸ್ ಬಾರ್ ಓನರ್, ಕೋಟಿ ಕೋಟಿ ರೂ. ಬಾಳುವ ಈ ವ್ಯಕ್ತಿ ಉಡುಪಿಯ ನಿರ್ಜನ ಪ್ರದೇಶದಲ್ಲಿ ಹೆಣವಾಗಿದ್ದ. ನವೀ ಮುಂಬೈನ ರೌಡಿ ಕಂ ಉದ್ಯಮಿ ಕಂ ರಾಜಕೀಯ ಪುಡಾರಿ ಎಂಬ ವಿಚಾರ ಈಗ ಗೊತ್ತಾಗಿದೆ. ಫೆಬ್ರವರಿ 9 ರಂದು ಅಪರಚಿತ ಹೆಣವಾಗಿದ್ದ ಇತನ ಮೃತದೇಹದ ಗುರುತನನ್ನು ಇಂದು ಪತ್ತೆ ಮಾಡಲಾಗಿತ್ತು. ಈ ವೇಳೆ ವಶಿಷ್ಟ ನಟೋರಿಯಸ್ ರೌಡಿ ಎಂಬ ಸಂಗತಿ ಗೊತ್ತಾಗಿದೆ.
ಉಡುಪಿ ಜಲ್ಲೆಯ ಹಿರಿಯಡ್ಕ ಠಾಣಾ ವ್ಯಾಪ್ತಿಯ ಬೈರಂಪಳ್ಳಿ ಎಂಬ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈತನ ಹೆಣ ಪತ್ತೆಯಾಗಿತ್ತು. ಕತ್ತು ಬಿಗಿದು ಆತನನ್ನು ಕೊಲೆ ಮಾಡಲಾಗಿತ್ತು. ಮೃತದೇಹ ಪತ್ತೆಯಾದ ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಘಟನೆ ಕುರಿತು ಸ್ಥಳೀಯ ರಮೇಶ್ ಶೆಟ್ಟಿ ಬೆಳ್ಳಂಪಳ್ಳಿ ಮಾತನಾಡಿ, ಬೆಳ್ಳಂಪಳ್ಳಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಬಿದ್ದಿರುವುದನ್ನು ಜೆಸಿಬಿಯ ಚಾಲಕ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ನಂತರ ಮಣಿಪಾಲ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿತ್ತು ಎಂದಿದ್ದಾರೆ.
ವಶಿಷ್ಟನ ಬಂಧುಗಳೇ ಹೇಳುವ ಪ್ರಕಾರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್‍ಗೆ ಈತ ದೂರದ ಸಂಬಂಧಿಯಂತೆ. ಈತನಿಗೆ ಬಿಜೆಪಿ ಮತ್ತು ಶಿವಸೇನೆ ಪಕ್ಷದ ನಾಯಕರ ಒಡನಾಟ ಜೋರಿತ್ತು. ಮಹಾರಾಷ್ಟ್ರದಲ್ಲಿ ಸ್ವಾಭಿಮಾನ್ ಸಂಘಟನಾ ಎಂಬ ಹೊಸ ರಾಜಕೀಯ ಪಕ್ಷದಲ್ಲಿ ಈತ ಗುರುತಿಸಿಕೊಂಡಿದ್ದ. ಇಷ್ಟೆಲ್ಲಾ ಇರುವ ಈತನಿಗೆ ಏಳೆಂಟು ತಿಂಗಳ ಹಿಂದೆ ಉಡುಪಿಯ ಎಕೆಎಂಎಸ್ ಗ್ಯಾಂಗ್‍ನ ಸೈಫ್ ಮತ್ತು ಅಕ್ರಮ್ ಪರಿಚಯವಾಗುತ್ತದೆ. ಯಾದವ್ ಪತ್ನಿ ಗೀತಾ ಯಾದವ್ ಹೇಳುವಂತೆ ಹದಿನೈದು ದಿನದ ಹಿಂದೆ ವಶಿಷ್ಟ ಯಾದವ್ ಉಡುಪಿಗೆ ಬಂದಿದ್ದ. ಉಡುಪಿಯಲ್ಲಿ ತಾನು ಸೈಫ್ ಮತ್ತು ಅಕ್ರಂ ಜೊತೆಗಿರುವುದಾಗಿ ವಿಡಿಯೋ ಕಾಲ್ ಮಾಡಿದ್ದ. ಆದರೆ ವಶಿಷ್ಟ ಯಾದವ್ ಸಾವಿನ ನಂತರ ಸೈಫ್ ಮತ್ತು ಅಕ್ರಂ ಕಣ್ಮರೆಯಾಗಿದ್ದಾರೆ. ಪತ್ನಿ ನೀತಾಗೆ ಅವರ ಮೇಲೆಯೇ ಸಂಶಯ ಬಂದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ನೀತಾ ಯಾದವ್, ಉಡುಪಿಗೆ ಬಂದ ನಂತರ ನಿರಂತರ ಫೋನ್ ಸಂಪರ್ಕದಲ್ಲಿ ಇದ್ದರು. ವಿಡಿಯೋ ಕಾಲ್ ಮಾಡಿದ ಸಂದರ್ಭ ಸೈಫುದ್ದೀನ್ ಮತ್ತು ಅಕ್ರಮ್ ಅವರನ್ನು ಪರಿಚಯಿಸಿದ್ದರು. ಆಮೇಲೆ ಏನೆಲ್ಲಾ ಬೆಳವಣಿಗೆ ಆಗಿದೆ ಎಂದು ತಿಳಿದಿಲ್ಲ. ಘಟನೆ ನಡೆದ ಮೇಲೆ ಅವರಿಬ್ಬರು ಸಂಪರ್ಕಕ್ಕೆ ಸಿಕ್ಕಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಇತ್ತ ಈಗಾಗಲೇ ಹಲವು ಕೊಲೆ ಮತ್ತು ಕೊಲೆ ಯತ್ನದ ಪ್ರಕರಣಗಳಲ್ಲಿ ಸೈಪ್ ಮತ್ತು ಗ್ಯಾಂಗ್ ಶಾಮೀಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.