ರಾಯಚೂರು: ಮುಂದಿನ ಅವಧಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕು ಎಂದು ಹಾಡಿ ಹೊಗಳಿದ್ದ ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಈಗ ಸಿಎಂ ವಿರುದ್ಧ ಗರಂ ಆಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಟ್ಲರ್ ಸಂಸ್ಕೃತಿ ಉಳ್ಳವರು. ಅಹಿಂದ ವರ್ಗದವರನ್ನು ಸಿಎಂ ಕಡೆಗಣನೆ ಮಾಡಿದ್ದಾರೆ ಎಂದು ನಮ್ಮ ಕಾಂಗ್ರೆಸ್ ಪಕ್ಷದ ಸ್ಥಾಪಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಎಚ್ ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್, ಜಾರಕಿಹೊಳಿಯವರನ್ನ ಸಿದ್ದರಾಮಯ್ಯ ಮೂಲೆ ಗುಂಪು ಮಾಡಿದ್ದಾರೆ. ಶೋಷಿತ ಸಮಾಜ ಕೈ ಹಿಡಿಯಲು ನಮ್ಮ ಕಾಂಗ್ರಸ್ ಸ್ಥಾಪನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್
ಹೈಕ ಭಾಗದ ಅಭಿವೃದ್ಧಿ ಕಡೆ ಸಿಎಂ ಗಮನ ಹರಿಸಲೇ ಇಲ್ಲ. ಬಿಜೆಪಿ ಕೂಡ ಹಿಂದುಳಿದವರಿಗೆ ಏನೂ ಮಾಡಿಲ್ಲ. ಕೋಮುವಾದ ಸೃಷ್ಟಿಸಿ ಅಧಿಕಾರ ಪಡೆಯುವ ಉದ್ದೇಶದಿಂದ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಮೇಲ್ವರ್ಗದವರ ಪರ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಕಾಂಗ್ರಸ್ ಸ್ಥಾಪನೆ ಮಾಡಿದ್ದೇವೆ. ಮುಂದೆ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ತಮ್ಮ ಪಕ್ಷ ನಿರ್ಣಾಯಕವಾಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಕೂಡಲಸಂಗಮದ ಸಮಾವೇಶದ ನಂತರ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಿಂದ ವಿಜಯಲಕ್ಷ್ಮಿ ಬೇವಿನ್ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅತೃಪ್ತರು ನಮ್ಮ ಕಾಂಗ್ರಸ್ ಗೆ ಬರಲಿದ್ದಾರೆ. ಪ್ರಭಾವಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ ಅಂತ ವರ್ತೂರ್ ಪ್ರಕಾಶ್ ಹೇಳಿದರು.
ಇದೆ ಸೆಪ್ಟೆಂಬರ್ ನಲ್ಲಿ ವರ್ತೂರ್ ಪ್ರಕಾಶ್ ಸಿದ್ದರಾಮಯ್ಯ ಪರ ವಹಿಸಿ ಮಾತನಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತನಗೆ ಟಿಕೆಟ್ ಕೊಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆಯನ್ನು ನೀಡಿದ್ದಾರೆ. ಮುಂದಿನ ಅವಧಿಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೆ ಸಿಎಂ ಆಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಿದ್ದರಾಮಯ್ಯನವರಿಗೂ ಯಾವ ಸಂಬಂಧವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ನಾನು ಕಣಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದರು.