– ತಾಯಿಯ ಒಂದು ವರ್ಷದ ನೋವಿಗೆ ನ್ಯಾಯ ಸಿಕ್ಕಿತು
– ಎಲ್ಲೇ ಅಡಗಿದ್ರೂ ಕಣ್ಣ ಮುಂದೆ ತಂದು ನಿಲ್ಲಿಸುತ್ತೇನೆ ಎಂದಿದ್ದ ದೈವ
ಉಡುಪಿ: ಕೊಲೆ ಪಾತಕಿ ಎಲ್ಲೇ ಅವಿತ್ತಿದ್ದರೂ ಕಣ್ಣ ಮುಂದೆ ತಂದು ನಿಲ್ಲಿಸುತ್ತೇನೆ ಎಂಬ ದೈವದ ಅಭಯ ನಿಜವಾಗಿದೆ. ಮಗನನ್ನು ಕಳೆದುಕೊಂಡು ಒಂದು ವರ್ಷದಿಂದ ಕಣ್ಣೀರು ಸುರಿಸುತ್ತಿದ್ದ ತಾಯಿಗೆ ವರ್ತೆ ಪಂಜುರ್ಲಿ ದೈವ (Varthe Panjurli) ನ್ಯಾಯ ಕೊಡಿಸಿದೆ. ಗೆಳೆಯನ ಕೊಂದ ಆರೋಪಿ ಕೋರ್ಟ್ (Court) ಮುಂದೆ ಶರಣಾಗಿದ್ದಾನೆ.
Advertisement
ಒಂದು ವರ್ಷ ಎರಡು ತಿಂಗಳ ಹಿಂದಿನ ಆ ಸಂಜೆ ಕರಾಳವಾಗಿತ್ತು. ಫೆಬ್ರವರಿ 5, 2023 ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕು ಅಂದು ಬೆಚ್ಚಿಬಿದ್ದಿತ್ತು. ಚೂರಿ ಇರಿತಕ್ಕೆ ಒಳಪಟ್ಟು ಶರತ್ ಶೆಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದರು. ಗೆಳೆಯರೇ ಅವರನ್ನು ಊರಿನ ದೈವ ನೇಮೋತ್ಸವದ ಸ್ಥಳದಿಂದ ಹೊರಗೆ ಕರೆದು ರಸ್ತೆ ಬದಿಯಲ್ಲಿ ಡ್ರ್ಯಾಗರ್ ನಿಂದ ಚುಚ್ಚಿ ಕೊಂದು (Murder) ಹಾಕಿದ್ದರು. ಸ್ಥಳದಿಂದ ಆರು ಆರೋಪಿಗಳು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಕಾಸರಗೋಡಿನಲ್ಲಿ ಲವ್ ಜಿಹಾದ್ ಸದ್ದು- ಹಿಂದೂ ಶಿಕ್ಷಕಿಯ ಮದ್ವೆಯಾದ ಮುಸ್ಲಿಂ ಯುವಕ!
Advertisement
ದೈವ ಭಕ್ತನಾಗಿ 30 ವರ್ಷಗಳಿಂದ ಮನೆಯಲ್ಲಿ ವರ್ತೆ ಪಂಜುರ್ಲಿ ದೈವದ ಸೇವೆ ಮಾಡಿಕೊಂಡಿದ್ದ ಶರತ್ ಸಾವು ಇಡೀ ಕುಟುಂಬವನ್ನು ದಿಗ್ಭ್ರಮೆ ಮಾಡಿತ್ತು. ಮಾರ್ಚ್ 2023ರಲ್ಲಿ ಮನೆಯಲ್ಲಿ ನೇಮೋತ್ಸವ ಸೇವೆ ಕೊಟ್ಟು ಕುಟುಂಬ ನೋವು ಹೇಳಿಕೊಂಡು ಕಣ್ಣೀರಿಟ್ಟಿತ್ತು. ಕೊಂದ ಆರೋಪಿ ಎಲ್ಲೂ ಹೋಗುವುದಿಲ್ಲ. ಆತನೇ ಬಂದು ಶರಣಾಗುತ್ತಾನೆ ನೋಡಿ ಎಂದು ವರ್ತೆ ಪಂಜುರ್ಲಿ ಅಭಯ ನೀಡಿತ್ತು.
Advertisement
ದೈವದ ಮಾತು ಈಗ ನಿಜವಾಗಿದೆ. ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಾನೇ ತಾನಾಗಿ ಬಂದು ನ್ಯಾಯಾಲಯದ (Court) ಮುಂದೆ ಶರಣಾಗಿದ್ದಾನೆ. ಅಂಡರ್‌ವರ್ಲ್ಡ್ ಲಿಂಕ್ ಹೊಂದಿದ್ದ ಈ ಕೊಲೆಯಲ್ಲಿ ಎಲ್ಲಾ ಪ್ರಮುಖ ಐದು ಮಂದಿ ಆರೋಪಿಗಳು ಶರಣಾಗಿದ್ದರೂ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದ.
Advertisement
ಶರತ್ ಶೆಟ್ಟಿ ಭೂ ವ್ಯವಹಾರ ನಡೆಸುತ್ತಿದ್ದರು. ಭೂ ವ್ಯವಹಾರದಲ್ಲಿ ಉಂಟಾದ ಸಂಘರ್ಷವೇ ಕೊಲೆಗೆ ಕಾರಣವಾಗಿತ್ತು. ಮಗನನ್ನು ಕಳೆದುಕೊಂಡ ನಂತರ ಶರತ್ ತಾಯಿ ಸುಲೋಚನಾ ಮೌನಕ್ಕೆ ಶರಣಾಗಿದ್ದಾರೆ. ಆರೋಪಿಗೆ ಕಠೋರ ಶಿಕ್ಷೆಯಾಗಬೇಕು ಎಂದಷ್ಟೇ ಹೇಳಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಸ್ ಕಮರಿಗೆ ಉರುಳಿ 28 ಮಂದಿ ದುರ್ಮರಣ
ಮೃತ ಶರತ್ ಸಹೋದರಿ ರೇಷ್ಮಾ ಮತ್ತು ಶರ್ಮಿಳಾ ಮಾತನಾಡಿ ನಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಗಂಡು ಮಗ. ಆತನೇ ಇಡೀ ಕುಟುಂಬಕ್ಕೆ ಆಧಾರ ಎಂದು ಅಂದುಕೊಂಡಿದ್ದೆವು. ನಮ್ಮ ತಾಯಿಯನ್ನು ನಮ್ಮ ಸಹೋದರ ಶರತ್ ನೋಡಿಕೊಳ್ಳುತ್ತಿದ್ದ. ಆತನಿಗೆ ಏಳೆಂಟು ವರ್ಷ ವಯಸ್ಸು ಇದ್ದಾಗಲೇ ಅವನು ದೈವದೇವರ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದ. ಅವನನ್ನು ಕೊಂದ ಆರೋಪಿಗಳಿಗೆ ಸೂಕ್ತ ಕಠಿಣ ಶಿಕ್ಷೆ ಆಗಬೇಕು. ನಮ್ಮ ತಾಯಿಯ ಕಣ್ಣೀರು ಆರೋಪಿಗಳನ್ನು ಹಾಗೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ದೈವ ತಾನು ಕೊಟ್ಟ ಮಾತು ಉಳಿಸಿಕೊಂಡಿದೆ. ಕುಟುಂಬಕ್ಕೆ ಪ್ರಮುಖ ಆರೋಪಿ ಯಾರೆಂದು ಪಕ್ಕಾ ಆಗಿದೆ. ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬ ಒತ್ತಾಯಿಸಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಹಲವಾರು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯಿದೆ.