ಆ. 11ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ

Public TV
2 Min Read
Kashi Vishwanath Temple

– ವಾರಾಣಸಿಯಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವದ ಕ್ರಮ

ಲಕ್ನೋ: ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಆಗಸ್ಟ್ 11 ರಿಂದ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ (Shri Kashi Vishwanath Temple) ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು (Plastic Ban) ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮಂದಿರದ ಆಡಳಿತ ಮಂಡಳಿ ಘೋಷಿಸಿದೆ.

ಈ ನಿರ್ಧಾರವನ್ನು ಧಾಮದ ಪಾವಿತ್ರ‍್ಯತೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ. ಆಡಳಿತ ಮಂಡಳಿಯು ಧಾಮದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಪೋಸ್ಟರ್‌ಗಳಲ್ಲಿ, ಆಗಸ್ಟ್ 11 ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ಪಾತ್ರೆಗಳೊಂದಿಗೆ ಮಂದಿರಕ್ಕೆ ಪ್ರವೇಶಿಸಲು ಅನುಮತಿಯಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ರೀತಿಯಾಗಿ ಭಕ್ತರಿಗೆ ಧಾಮದ ಪಾವಿತ್ರ‍್ಯತೆ, ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಕಾಪಾಡಲು ಸಹಕರಿಸುವಂತೆ ವಿನಂತಿಸಿಕೊಂಡಿದೆ. ಇದನ್ನೂ ಓದಿ: ಮುಡಾ ಹಗರಣ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಆಯೋಗದ ವರದಿ ಸಲ್ಲಿಕೆ

ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಮಾತನಾಡಿ, ಕಾಶಿ ವಿಶ್ವನಾಥ ಧಾಮ ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಮಾದರಿಯಾಗಬೇಕು. ಈ ಉಪಕ್ರಮವು ಪವಿತ್ರ ವಾತಾವರಣವನ್ನು ಹೊಂದಿರುವ ಧಾಮವನ್ನು ಮಾಲಿನ್ಯ ಮುಕ್ತವಾಗಿರಿಸುವ ಗುರಿಯನ್ನು ಹೊಂದಿದೆ. ಸಾವನ್ ತಿಂಗಳಿನ ಮೊದಲ ಸೋಮವಾರದಿಂದ ಭಕ್ತರಿಗೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇತರ ಕಾಣಿಕೆಗಳು ಹಾಗೂ ಪಾಸ್ಟಿಕ್ ಬಾಟಲಿಗಳಲ್ಲಿ ತರದಂತೆ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಅಧಿಕಾರ ದುರ್ಬಳಕೆ ಬಗ್ಗೆ ಜನರಿಗೆ ಹೇಳಲು ರಾಹುಲ್ ಗಾಂಧಿ ಪ್ರತಿಭಟನೆ: ಡಿಕೆ ಶಿವಕುಮಾರ್

ಈ ನಿಷೇಧದಿಂದ ಭಕ್ತರು ಶಿವಲಿಂಗಕ್ಕೆ ಜಲಾರ್ಪಣೆ ಮಾಡಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಲು ಸಾಧ್ಯವಿಲ್ಲ. ಬದಲಿಗೆ, ಲೋಹದ ಪಾತ್ರೆಗಳು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಸೂಚಿಸಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ವಾರಾಣಸಿ ಮಹಾನಗರ ಪಾಲಿಕೆ, ಹಲವಾರು ಎನ್‌ಜಿಒಗಳು ಮತ್ತು ಸ್ಥಳೀಯ ಸ್ವಯಂಸೇವಕರು ಸಹಕಾರ ನೀಡುತ್ತಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

2024ರ ಡಿಸೆಂಬರ್‌ನಲ್ಲಿ ನಡೆದ ಮಂದಿರದ ಟ್ರಸ್ಟ್ನ ಸಭೆಯಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್‌ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೆ, ಹಾಲು, ಹೂವು-ಹಾರಗಳನ್ನು ತರಲು ಭಕ್ತರು ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳನ್ನು ಬಳಸುತ್ತಿದ್ದರು. ಈಗ ಈ ನಿಷೇಧವನ್ನು ಆಗಸ್ಟ್ 11ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮಂದಿರದ ಆಡಳಿತ ಮಂಡಳಿಯು ತಿಳಿಸಿದೆ.

ಸದ್ಯ ಆಗಸ್ಟ್ 9ರ ವರೆಗೆ ಭಕ್ತಾಧಿಗಳು ಧಾಮಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ತಡೆಯಲು ಪ್ರಯತ್ನಿಸಲಾಗುವುದು. ಆಗಸ್ಟ್ 10ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳು ಅಂದರೆ ಹಾಲಿನ ಬಾಟಲಿ ಅಥವಾ ಹೂವು-ಹಾರಗಳ ಪ್ಲಾಸ್ಟಿಕ್ ಬುಟ್ಟಿಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Share This Article