ಲಕ್ನೋ: ಜ್ಞಾನವಾಪಿ ಸಂಕೀರ್ಣದಲ್ಲಿ (Gyanvapi Mosque) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹೆಚ್ಚುವರಿ ಸಮೀಕ್ಷೆಗೆ ಹಿಂದೂ ಪರವಾಗಿ ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ವಜಾಗೊಳಿಸಿದೆ.
ವಾರಣಾಸಿಯ ಸಿವಿಲ್ ನ್ಯಾಯಾಲಯದ ನ್ಯಾ.ಯುಗುಲ್ ಶಂಭು ಅವರ ನೇತೃತ್ವದ ಪೀಠವು ಅರ್ಜಿಯನ್ನು ವಜಾ ಮಾಡಿದೆ.
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ವಿಜಯ್ ಶಂಕರ್ ರಸ್ತೋಗಿ ಅವರು, ಆದೇಶವನ್ನು ಪರಿಶೀಲಿಸಿ ನಂತರ ಅಲಹಾಬಾದ್ ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ, ರಸ್ತೋಗಿ ಅವರು ವಾರಣಾಸಿಯ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಡೀ ಜ್ಞಾನವಾಪಿ ಸಂಕೀರ್ಣದ ಸಮಗ್ರ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ಆದೇಶ ನೀಡುವಂತೆ ಕೋರಿದ್ದರು.
ರಸ್ತೋಗಿ, ‘ಪ್ರಾಚೀನ ವಿಗ್ರಹ ಸ್ವಯಂಭು ಲಾರ್ಡ್ ವಿಶ್ವೇಶ್ವರ್ ಮತ್ತು ಇತರರು ವಿ. ಅಂಜುಮನ್ ಇಂತೇಜಾಮಿಯಾ ಮಸ್ಜೀದ್ ಸಮಿತಿಯ ಪ್ರಕರಣದಲ್ಲಿ, ನಾವು ಸಂಪೂರ್ಣ ಜ್ಞಾನವಾಪಿ ಸಂಕೀರ್ಣದ ವ್ಯಾಪಕ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ಆದೇಶ ನೀಡುವಂತೆ ನಾವು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದರು.