ಮುಂಬೈ: ವಿಮಾನ ಹಾರಾಟದ ವೇಳೆಯೇ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನಿಂದ (Mumbai) ವಾರಣಾಸಿಗೆ (Varanasi) ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರ ಮೂಲದ ಸುಶೀಲಾ ದೇವಿ (89) ಎಂದು ತಿಳಿಯಲಾಗಿದೆ.
ಭಾನುವಾರ ಮುಂಬೈನಿಂದ 6ಇ-5028 ಇಂಡಿಗೋ ವಿಮಾನ ವಾರಣಾಸಿಗೆ ತೆರಳುತ್ತಿತ್ತು. ಮೃತ ವೃದ್ಧೆ ಮುಂಬೈನಲ್ಲಿ ವಿಮಾನವನ್ನು ಹತ್ತಿದ್ದರು. ಬಳಿಕ ವಿಮಾನ ಟೇಕ್ ಆಫ್ ಆದ ಮೇಲೆ ವೃದ್ಧೆ ಅಸ್ವಸ್ಥರಾಗಲು ಪ್ರಾರಂಭಿಸಿದ್ದು, ಮುಂಬೈನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಚಿಕಲ್ತಾನ ವಿಮಾನ ನಿಲ್ದಾಣದಲ್ಲಿ (Chikalthana Aiport) ರಾತ್ರಿ 10 ಗಂಟೆ ಸುಮಾರಿಗೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.ಇದನ್ನೂ ಓದಿ: ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನ ಸೈಲೆಂಟ್ ಮಾಡಲು ಯತ್ನಿಸುತ್ತಿದೆ: ಹೆಚ್‍ಡಿಕೆ
ತುರ್ತು ಭೂಸ್ಪರ್ಶದ ಬಳಿಕ ವೃದ್ಧೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದರು.
ಇನ್ನೂ ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಲು ಎಲ್ಲ ರೀತಿಯ ವಿಧಾನಗಳನ್ನು ಅನುಸರಿಸಲಾಗಿದೆ. ಇಂಡಿಗೋ ಸಂಸ್ಥೆ ಮೃತ ವೃದ್ಧೆಯ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದೆ. ಬಳಿಕ ವೃದ್ಧೆಯ ಶವವನ್ನು ಛತ್ರಪತಿ ಸಂಭಾಜಿನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದರು.
ಬಳಿಕ ವಿಮಾನ ಅಲ್ಲಿಂದ ವಾರಣಾಸಿಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದರು.ಇದನ್ನೂ ಓದಿ: ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ದಾಳಿ – ಕಾವೇರಿ ನಿಗಮದ ಇಂಜಿನಿಯರ್ ಲಾಕ್