ವರಮಹಾಲಕ್ಷ್ಮಿ ಹಬ್ಬಕ್ಕೆ ಮುಜರಾಯಿ ಗಿಫ್ಟ್- ದೇಗುಲಕ್ಕೆ ಬರೋ ಹೆಣ್ಮಕ್ಕಳಿಗೆ ಅರಿಶಿಣ, ಕುಂಕುಮ!

Public TV
3 Min Read
VARAMAHALAKSHMI

ಬೆಂಗಳೂರು: ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ. ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದರೆ ಮಹಿಳೆಯರಿಗೆ ಖುಷಿ ಇಮ್ಮುಡಿಯಾಗುತ್ತೆ. ಅದನ್ನ ಇನ್ನಷ್ಟು ಹೆಚ್ಚಿಸಲು ಈ ಬಾರಿ ಮಹಿಳೆಯರಿಗೆ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಉಡುಗೊರೆ ಕೊಡಲು ಮುಜರಾಯಿ ಇಲಾಖೆ ನಿರ್ಧಾರ ಮಾಡಿದೆ.

CKB TEMPLE 2

ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ ಮನೆ ಮಾಡಿದೆ. ಹಬ್ಬದ ದಿನ ಬೆಂಗಳೂರಿನ ಮುಜರಾಯಿ ದೇಗುಲಗಳಿಗೆ ಬರುವ ಮಹಿಳೆಯರಿಗೆ ಮುಜರಾಯಿ ಇಲಾಖೆ ಗಿಫ್ಟ್ ನೀಡುತ್ತಿದೆ. ಬೆಂಗಳೂರಿನ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವಂತೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.

TEMPLE

ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಲಾಗಿತ್ತು. ಇದರಂತೆ ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮವನ್ನು ವಿತರಿಸಲಾಗುತ್ತೆ.

KR MARKET 7

ಗಗನಕ್ಕೇರಿದ ಹೂವು-ಹಣ್ಣಿನ ದರ: ವರಮಹಾಲಕ್ಷ್ಮಿ ಹಬ್ಬದಿಂದಾಗಿ ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ದರೂ ಕೆ.ಆರ್. ಮಾರ್ಕೆಟ್, ಬನಶಂಕರಿ ದೇಗುಲ ಸೇರಿದಂತೆ, ಅಣ್ಣಮ್ಮ, ಮಹಾಲಕ್ಷ್ಮಿ ದೇವಾಲಯಗಳ ಬಳಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು. ಶ್ರಾವಣ ಮಾಸ ಶುರುವಾದ್ರೆ ಸಾಕು ಸಾಲು ಸಾಲು ಹಬ್ಬಗಳು ಎಂಟ್ರಿ ಕೊಡುತ್ತವೆ. ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದ್ರೆ ಮಹಿಳೆಯ ಪ್ರಿಯವಾದ ಹಬ್ಬ. ಈ ಹಬ್ಬಕ್ಕೆ ಹೂವು ಪ್ರದಾನ ವಸ್ತುವಾದ್ರೆ, ನಂತರದ ಆದ್ಯತೆ ಹಣ್ಣುಗಳಿಗೆ. ಹೀಗಾಗಿ ಹೂವಿನ ದರದ ಏರಿಕೆಯ ಜೊತೆಗೆ ಹಣ್ಣಿನ ದರವೂ ಏರಿಕೆಯಾಗಿದೆ. ಹಾಗಾದ್ರೆ ಏನೆಲ್ಲಾ ಬೆಲೆ ಏರಿಕೆಯಾಗಿದೆ ಅಂತ ನೋಡೋದಾದ್ರೆ.

KR MARKET 1 1

ಗಗನಕ್ಕೇರಿದ ಹೂವುಗಳ ಬೆಲೆ: ಸೇವಂತಿಗೆ ಹೂವು ಕೆಜಿ – 320 ರೂ., ಮಲ್ಲಿಗೆ ಹಾರ – 1,000 ರೂ., ಗುಲಾಬಿ ಹೂವು ಕೆಜಿ – 320ರಿಂದ 350 ರೂ., ಮಲ್ಲಿಗೆ ಕೆಜಿ – 2,350 ರೂ., ಕಮಲ ಹೂ ಜೋಡಿ 80-100 ರೂ., ಬಟನ್ಸ್ ಹೂವು ಕೆಜಿ – 300 ರೂ., ಮಳ್ಳೆಹೂವು ಕೆಜಿ – 320 ರೂ., ಕನಕಾಂಬರ ಹೂ ಕೆಜಿ – 3,500-4,000 ರೂ.

KR MARKET 5

ಗಗನಕ್ಕೇರಿದ ಹಣ್ಣುಗಳ ಬೆಲೆ: ಬಾಳೆ ಹಣ್ಣು ಕೆಜಿ – 120ರಿಂದ 150 ರೂ., ಸೀತಾಫಲ ಕೆಜಿ – 200 ರೂ., ಸೇಬು ಕೆಜಿ – 320ರಿಂದ 460 ರೂ., ಮೂಸಂಬಿ ಕೆಜಿ – 130ರಿಂದ 150 ರೂ., ದಾಳಿಂಬೆ ಕೆಜಿ – 320 ರೂ., ದ್ರಾಕ್ಷಿ ಕೆಜಿ – 400 ರೂ., ಅಡಿಕೆ ಎಲೆ 1 ಕಟ್ಟಿಗೆ 100 ರೂ., ಅನಾನಸ್ 1ಕ್ಕೆ 80-100 ರೂ.

KR MARKET 6

ಅಗತ್ಯ ವಸ್ತುಗಳ ಬೆಲೆ: ಮಾವಿನ ಎಲೆ 1 ಕಟ್ಟು – 20 ರೂ., ಬಾಳೆ ಕಂಬ – 50 ರೂ., ಬೇವಿನ ಸೊಪ್ಪು 1 ಕಟ್ಟು – 20 ರೂ., ತುಳಸಿ ತೋರಣ 1 ಮಾರು – 50 ರೂ. ಕಳೆದ ಎರಡು ವರ್ಷ ಕೊರೊನಾದಿಂದ ಹಬ್ಬಗಳಿಗೆ ಬ್ರೇಕ್ ಬಿದ್ದಿತ್ತು. ಆದ್ರೆ ಈ ವರ್ಷ ಕೊರೊನಾ ಕಂಟ್ರೋಲ್ ಗೆ ಬಂದಿದ್ದು, ಸಿಲಿಕಾನ್ ಸಿಟಿ ಜನರು ವರಮಹಾಲಕ್ಷ್ಮಿ ಹಬ್ಬಕ್ಕೆ ಜೇಬಿಗೆ ಕತ್ತರಿ ಬಿದ್ರು ಸಹ ಮಾರ್ಕೆಟ್ ನಲ್ಲಿ ಹೂ, ಹಣ್ಣು ಖರೀದಿ ಮಾಡಿ ಹಬ್ಬವನ್ನ ಗ್ರ್ಯಾಂಡ್ ಆಗಿ ಮಾಡ್ತಿದ್ದಾರೆ. ಇದರ ಜೊತೆಗೆ ಮಹಿಳೆಯರಿಗೆ ದೇವಾಲಯಗಳಲ್ಲಿ ಕುಂಕುಮ, ಬಳೆ ನೀಡ್ತೀರೋದು ಸಂತಸದ ವಿಷಯ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *