ತುಮಕೂರು: ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು.
ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಮೊದಲನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ.
ಹೌದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲೆಯ ಶ್ರೀಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ ನೇರವೇರಿಸಲಾಯಿತು. ಬೆಳಗ್ಗೆ 6 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಜಾ ವಿಧಿವಿಧಾನಗಳು ನಡೆಯಿತು. ಹಬ್ಬದ ಅಂಗವಾಗಿ ಮಹಾಲಕ್ಷ್ಮಿ ದೇವರಿಗೆ ವೀಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ಶ್ರೀದೇವರಿಗೆ ಪೂಜೆ ಸಲ್ಲಿಸಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.