– ಬರದನಾಡಿನ ಜೀವನಾಡಿ ವಾಣಿವಿಲಾಸ ಸಾಗರ ಭರ್ತಿ
ಚಿತ್ರದುರ್ಗ: ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರೋ ಜಿಲ್ಲೆಯ, ರೈತರ ಏಕೈಕ ಜೀವನಾಡಿ ಅನಿಸಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ಕಳೆದ ಆರು ವರ್ಷಗಳಿಂದ ಮಳೆಯಿಲ್ಲದೇ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿತ್ತು. ಆದರೆ ಸತತ ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ 101 ಅಡಿಗೂ ಹೆಚ್ಚು ನೀರಿನ ಮಟ್ಟವನ್ನು ತಲುಪಿದೆ.
ಸುಮಾರು 112 ವರ್ಷಗಳ ಇತಿಹಾಸ ಇರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ 57ನೇ ಬಾರಿ 100 ಅಡಿ ದಾಟಿದೆ. ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ರೈತರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾಗಿರೋ ಈ ಜಲಾಶಯಕ್ಕೆ 2010ರಲ್ಲಿ 112.75 ಅಡಿ, 2011ರಲ್ಲಿ 106.05 ಅಡಿ ನೀರು ಬಂದಿತ್ತು. ಅದು ಬಿಟ್ಟರೆ ಯಾವುದೇ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲ. ಆದರೆ ಈ ವರ್ಷ 101.4 ಅಡಿ ನೀರು ಹರಿದು ಬಂದಿದೆ.
ಕಳೆದ ಮೂರು ತಿಂಗಳ ಹಿಂದೆ ವಿವಿ ಸಾಗರದ ಜಲಾಶಯದ ನೀರಿನ ಮಟ್ಟ 61 ಅಡಿಗೆ ಕುಸಿದಿತ್ತು. ಚಿತ್ರದುರ್ಗ ಜಿಲ್ಲೆಯಾದ್ಯಂತ ನೀರಿನ ಬವಣೆ ಶುರುವಾಗಿತ್ತು. ಆದರೆ ಚಿಕ್ಕಮಗಳೂರು ಭಾಗದಲ್ಲಿ ಕಳೆದ ತಿಂಗಳು ಸುರಿದ ಮಹಾ ಮಳೆಯಿಂದಾಗಿ ಸುಮಾರು 9 ಟಿಎಂಸಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ 2 ಟಿಎಂಸಿ ನೀರಿನೊಂದಿಗೆ 101.4 ಅಡಿಯಾಗಿದ್ದು, ಸುಮಾರು 11 ಟಿಎಂಸಿ ಜಲಾಶಯದಲ್ಲಿ ಸಂಗ್ರಹವಾಗಿದೆ.
1911ರಲ್ಲಿ ಮೊದಲ ಬಾರಿಗೆ 109.66 ಅಡಿ ನೀರು ಸಂಗ್ರಹವಾಗಿತ್ತು. ತದನಂತರ 1933 ರಲ್ಲಿ 135.25 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾದಿಂದ ಪ್ರತಿದಿನ 450 ರಿಂದ 550 ಕ್ಯೂಸೆಕ್ಸ್ ನೀರು ಸಂಗ್ರಹವಾಗುತ್ತದೆ. ಈ ನೀರು ಮಾರ್ಚ್ ಅಂತ್ಯದವರಿಗೂ ಭದ್ರಾ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ನಿರ್ಮಾಣ:
ವಾಣಿ ವಿಲಾಸ ಜಲಾಶಯವನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1898 ರಿಂದ 1907 ರಲ್ಲಿ ನಿರ್ಮಾಣ ಮಾಡಲಾಗಿದೆ. ಅಣೆಕಟ್ಟು ಈಗ ಶತಮಾನ ದಾಟಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ ಈ ಜಲಾಶಯವು ಹಿರಿಯೂರು ತಾಲೂಕಿನ ವಾಣಿವಿಲಾಪುರ ಹತ್ತಿರ ಮಾರಿಕಣಿವೆ ಎಂಬ ಪ್ರದೇಶದಲ್ಲಿದ್ದು, ಈ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗೆ ನಿರ್ಮಿಸಿದ್ದಾರೆ.
1897 ರಲ್ಲಿ ಪ್ರಾರಂಭವಾದ ಕಾಮಗಾರಿ 10 ವರ್ಷದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಗಿಸಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯ ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಹೆಚ್ಚು ಸಹಕಾರಿಯಾಗಿದೆ. ಈ ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50. ಮೀಟರ್, ಜಲಾವೃತ ಪ್ರದೇಶ 5374. ಚದರ ಕಿ.ಮೀ, ಡ್ಯಾಂನಲ್ಲಿ 850.30 (30 ಟಿಎಂಸಿ) ನೀರು ಸಂಗ್ರಹವಾಗುತ್ತದೆ.
ಹಿರಿಯೂರಿನ ಜೀವನಾಡಿ ವಿವಿ ಸಾಗರ ಡ್ಯಾಂ:
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಹೊಂದಾದ ಹಿರಿಯೂರಿನ ವಿವಿ ಸಾಗರ ಬರಪೀತ ಪ್ರದೇಶಗಳಿಗೆ ನೀರು ಉಣಿಸುವ ಜಲಾಶಯವಾಗಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಡಿಆರ್‌ಡಿಓಗೆ ಕುಡಿಯವ ನೀರು ಪೂರೈಸಲಾಗುತ್ತಿದೆ. ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿವಿ ಸಾಗರದ ನೀರಿನಿಂದ ಕಬ್ಬು, ಭತ್ತ, ರಾಗಿ, ಹತ್ತಿ, ತೆಂಗು, ಅಡಿಕೆ, ಬಾಳೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಹಿರಿಯೂರು ಮಲೆನಾಡಿನಂತೆ ಕಂಗೊಳಿಸುತಿತ್ತು. ಈಗ ಹಿರಿಯೂರು ಬರದನಾಡಗಿದ್ದು, ವಾಣಿವಿಲಾಸ ಸಾಗರಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರ್ತಿರೋದು ರೈತರಲ್ಲಿ ಉಳುಮೆ ಮಾಡುವ ಉತ್ಸಾಹ ಹೆಚ್ಚಿಸಿದೆ.