- ವಂದೇ ಮಾತರಂಗೆ ವಿರೋಧ – ದೇಶ ವಿಭಜನೆಗೆ ಕಾರಣ
ಲಕ್ನೋ: ಉತ್ತರ ಪ್ರದೇಶದ (Uttar Pradesh) ಶಾಲೆ (School), ಕಾಲೇಜುಗಳಲ್ಲಿ ವಂದೇ ಮಾತರಂ ಗೀತೆ (Vande Mataram) ಹಾಡುವುದು ಕಡ್ಡಾಯ ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಘೋಷಿಸಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ‘ಏಕತಾ ಯಾತ್ರೆ’ ಮತ್ತು ವಂದೇ ಮಾತರಂ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ನಾವು ವಂದೇ ಮಾತರಂ ಗೀತೆ ಹಾಡುವುದನ್ನು ಕಡ್ಡಾಯಗೊಳಿಸುತ್ತೇವೆ. ರಾಷ್ಟ್ರದ ಬಗ್ಗೆ ಗೌರವ ಮತ್ತು ಹೆಮ್ಮೆಯ ಭಾವನೆ ಮೂಡಿಸುವ ಗುರಿಯಿಂದ ಈ ಕ್ರಮ ಜಾರಿ ಮಾಡಲಾಗುವುದು ಎಂದರು. ಇದನ್ನೂ ಓದಿ: ವಂದೇ ಮಾತರಂ ಗೀತೆಯಲ್ಲಿರೋ ಪ್ರತಿ ಪದ ಒಂದು ಮಂತ್ರ, ಶಕ್ತಿ.. ದುರದೃಷ್ಟವಶಾತ್ ಒಂದು ಭಾಗ ಬೇರ್ಪಡಿಸಲಾಯಿತು: ಮೋದಿ
ವಂದೇ ಮಾತರಂನ್ನು ಸಮಾಜವಾದಿ ಪಕ್ಷದ ಸಂಸದರೊಬ್ಬರು ಟೀಕಿಸಿದ್ದ ವಿಚಾರವಾಗಿ ಇದೇ ವೇಳೆ ಅವರು ಅಸಮಾಧಾನ ಹೊರಹಾಕಿದರು. ಭಾರತದ ಸಮಗ್ರತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ತಪ್ಪಿಸಿಕೊಂಡು, ಜಿನ್ನಾ ಅವರನ್ನು ಗೌರವಿಸುವ ಕಾರ್ಯಕ್ರಮಗಳಿಗೆ ನಾಚಿಕೆಯಿಲ್ಲದೆ ಹಾಜರಾಗುವವರು ಅಂಥವರು. ಯಾರಾದರೂ ರಾಷ್ಟ್ರದ ಸಮಗ್ರತೆಯನ್ನು ಪ್ರಶ್ನಿಸಲು ಧೈರ್ಯ ಮಾಡಿದರೆ, ಅಂತವರ ಉದ್ದೇಶ ಬೇರೂರುವ ಮೊದಲು ನಾವು ಅದನ್ನು ಹೂತುಹಾಕಬೇಕು ಎಂದು ಕರೆಕೊಟ್ಟರು.
1896 ರಿಂದ 1922 ರವರೆಗೆ, ಪ್ರತಿ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು, ಆದರೆ 1923 ರಲ್ಲಿ, ಜೌಹರ್ ಕಾಂಗ್ರೆಸ್ ಅಧ್ಯಕ್ಷರಾದಾಗ, ಹಾಡು ಪ್ರಾರಂಭವಾದ ತಕ್ಷಣ ಅವರು ಹೊರನಡೆದರು. ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ನಿರಾಕರಿಸಿದ್ದರು. ವಂದೇ ಮಾತರಂಗೆ ವ್ಯಕ್ತವಾದ ವಿರೋಧ ಭಾರತದ ವಿಭಜನೆಯ ದುರದೃಷ್ಟಕರ ಕಾರಣಗಳಲ್ಲಿ ಒಂದಾಯಿತು ಎಂದು ಅವರು ಹೇಳಿದರು.
ದೆಹಲಿಯಲ್ಲಿ ನಡೆದ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಗೀತೆಯ 150 ವರ್ಷದ ಸಂಭ್ರಮವನ್ನು ವರ್ಷಪೂರ್ತಿ ಆಚರಣೆಗೆ ಕರೆಕೊಟ್ಟಿದ್ದರು. ಈ ವೇಳೆ, ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ. ಇದು ನಮಗೆ ಹೊಸ ಸ್ಫೂರ್ತಿ ನೀಡುತ್ತದೆ. ದೇಶದ ಜನರಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ತ್ರಿವರ್ಣ ಧ್ವಜ ಹಿಡಿದು ‘ವಂದೇ ಮಾತರಂ’ ಹಾಡಿದ ಟೀಂ ಇಂಡಿಯಾ ಆಟಗಾರರು, ಫ್ಯಾನ್ಸ್ – ಮೈನವಿರೇಳಿಸುವ ವೀಡಿಯೋ ಹಂಚಿಕೊಂಡ RCB

