ಜೈಪುರ: ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಡಿಕ್ಕಿ ಹೊಡೆದು, ಹಸು ಸಾವನ್ನಪ್ಪಿದ್ದಲ್ಲದೇ, ರೈಲ್ವೆ ಅಳಿ ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಸು ಬಿದ್ದು ಆತನೂ ಸಾವಿಗೀಡಾದ ಘಟನೆ ರಾಜಸ್ಥಾನ (Rajasthan) ಅಲ್ವಾರ್ ಜಿಲ್ಲೆಯ ಅರಾವಳಿ ವಿಹಾರ್ ಪೊಲೀಸ್ (Aravali Vihar Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿ-ಜೈಪುರ-ಅಜ್ಮೀರ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ವೇಗವಾಗಿ ಚಲಿಸುತ್ತಿದ್ದ ರೈಲು ಅಡ್ಡ ಬಂದ ಹಸುವಿಗೆ ಬಡಿದಿದೆ. ರೈಲು ಬಡಿದ ರಭಸಕ್ಕೆ ಹಾರಿದ ಹಸು ಅಳಿಯ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದು, ಹಸುವಿನೊಂದಿಗೆ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮದುವೆಯಾಗುವಂತೆ ಕೇಳಿದ್ದಕ್ಕೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಕೊಂದೇಬಿಟ್ಟ – ಮುಂದೇನಾಯ್ತು?
ಮೃತ ವ್ಯಕ್ತಿ ಭಾರತೀಯ ರೈಲ್ವೆಯ ನಿವೃತ್ತ ಎಲೆಕ್ಟ್ರಿಷಿಯನ್ ಶಿವದಯಾಳ್ ಶರ್ಮಾ ಎಂದು ಹೇಳಲಾಗಿದೆ. 23 ವರ್ಷಗಳ ಹಿಂದೆ ಶರ್ಮಾ ನಿವೃತ್ತರಾಗಿದ್ದರು. ಮೂತ್ರ ವಿಸರ್ಜನೆ ಮಾಡುವ ವೇಳೆ ಶರ್ಮಾ ಸಾವನ್ನಪ್ಪಿದ್ದಾರೆ ಎಂದು ಶಿವದಯಾಳ್ ಶರ್ಮ ಅವರ ಸಂಬಂಧಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?
ಏನಿದು ಘಟನೆ?
ಶುಕ್ರವಾರ ಬೆಳಗ್ಗೆ 8.30ರ ವೇಳೆ ಕಾಲಿಮೊರಿ ಗೇಟ್‌ನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪಾಸ್ ಆಗಿತ್ತು. ಈ ವೇಳೆ ಟ್ರೈನ್ ಬಹಳ ವೇಗದಲ್ಲಿದ್ದು, ಹಸುವಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಹಸು 30 ಮೀಟರ್ ದೂರಕ್ಕೆ ಹಾರಿ, ರೈಲ್ವೆ ಟ್ರ‍್ಯಾಕ್‌ನ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿವದಯಾಳ್ ಅವರ ಮೇಲೆ ಬಿದ್ದಿದೆ. ಹಸು ಇದ್ದ ಭಾರ ಹಾಗೂ ರೈಲು ಹೊಡೆದ ರಭಸ ಇವೆಲ್ಲವೂ ಶಿವದಯಾಳ್ ಅವರ ಸಾವಿಗೆ ಕಾರಣವಾಗಿದೆ. ವ್ಯಕ್ತಿಯ ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶಿವದಯಾಳ್ ಅವರ ಜೊತೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದ, ಆತನಿಗೆ ಘಟನೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.