ನವದೆಹಲಿ: ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ಕಲ್ಲು ತೂರಾಟ ನಡೆಸಿದ್ದಾರೆ.
2 ತಿಂಗಳಲ್ಲಿ 4ನೇ ಬಾರಿಗೆ ಈ ರೀತಿಯ ಘಟನೆ ನಡೆಯುತ್ತಿದ್ದು, ಉತ್ತರ ಪ್ರದೇಶದ ಅಚಲ್ದಾ ಬಳಿ ಡ್ರೈವರ್ ಸೀಟಿನ ಮುಂಭಾಗದಲ್ಲಿರುವ ಸ್ಕ್ರೀನ್ ಮೇಲೆ ಕಲ್ಲು ತೂರಿ ಒಡೆದು ಹಾಕಿದ್ದಾರೆ. ಇದರ ಜೊತೆಯಲ್ಲೇ 7 ಕೋಚ್ ಗಳ ಒಟ್ಟು 8 ಕಿಟಕಿಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ.
Advertisement
ರೈಲು ಅಧಿಕೃತ ಓಡಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ತುಂಡ್ಲಾ ಜಂಕ್ಷನ್ ಬಳಿ ಕಲ್ಲು ತೂರಾಟ ನಡೆದಿತ್ತು. ರೈಲು ಪರೀಕ್ಷಾರ್ಥ ಓಡಾಟ ಆರಂಭ ನಡೆಸಿದ ಸಂದರ್ಭದಲ್ಲಿ 2 ಬಾರಿ ಕಲ್ಲೆಸೆದು ಹಾನಿ ಮಾಡಲಾಗಿತ್ತು.
Advertisement
Advertisement
ಫೆಬ್ರವರಿ ಮೊದಲ ವಾರದಲ್ಲಿ ಅಲಹಾಬಾದ್ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದೆಹಲಿಯ ಲಹೋರಿ ಗೇಟ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ಎರಡನೇ ಬೋಗಿಗೆ ಕಲ್ಲು ಎಸೆದ ಪರಿಣಾಮ ಕಿಟಕಿಯ ಗ್ಲಾಸ್ ಒಡೆದು ಹೋಗಿತ್ತು. ಈ ಘಟನೆಯಲ್ಲಿ ಯಾರೂ ಗಾಯಗೊಳ್ಳದ ಕಾರಣ ದೂರು ದಾಖಲಿಸಿಕೊಂಡಿರಲಿಲ್ಲ. ಕಳೆದ ಡಿಸೆಂಬರ್ ನಲ್ಲಿ ದೆಹಲಿ ಮತ್ತು ಆಗ್ರಾ ನಡುವಿನ ಪರೀಕ್ಷಾರ್ಥ ಓಡಾಟದ ಸಮಯದಲ್ಲೂ ಕಲ್ಲು ತೂರಾಟ ನಡೆದಿತ್ತು.
Advertisement
ಪುಲ್ವಾಮಾ ಭಯೋತ್ಪಾದಕರ ದಾಳಿ ನಡೆದ ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರು ಫೆ.15 ರಂದು ರೈಲಿಗೆ ಹಸಿರು ನಿಶಾನೆ ತೋರಿದ್ದರು. ಫೆ. 17 ರಿಂದ ರೈಲಿನ ವಾಣಿಜ್ಯ ಓಡಾಟ ಆರಂಭವಾಗಿತ್ತು. ಸಂಚಾರ ಆರಂಭಿಸಿದ ಮೊದಲ ದಿನವೇ 2 ವಾರಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿತ್ತು. ಈ ಕುರಿತು ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ದೆಹಲಿ ಮತ್ತು ವಾರಣಾಸಿ ಮಧ್ಯೆ ಈ ರೈಲು ಸಂಚರಿಸುತ್ತಿದೆ. 850 ಕಿ.ಮೀ ದೂರದ ಪ್ರಯಾಣಕ್ಕೆ ಈ ಮೊದಲು 14 ಗಂಟೆ ಬೇಕಿದ್ದರೆ ಈ ರೈಲಿನಲ್ಲಿ ಕೇವಲ 8 ಗಂಟೆಯಲ್ಲಿ ಕ್ರಮಿಸಬಹುದು. ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ವಾರದ 5 ದಿನ ಈ ರೈಲು ಸಂಚರಿಸುತ್ತದೆ.
ರೈಲಿನ ವಿಶೇಷತೆ ಏನು?
ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ.
2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18′ ಎಂದು ಆರಂಭದಲ್ಲಿ ಹೆಸರಿಡಲಾಗಿತ್ತು. ಈಗಿನ ರೈಲುಗಳಂತೆ ಈ ರೈಲು ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗವಾಗಿ ರೈಲು ಸಂಚರಿಸುತ್ತದೆ.
ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ. ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ, ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv